ನಂಜನಗೂಡು ಕೊರೊನಾ ಮುಕ್ತ ಮಾಡಲು  ಎಲ್ಲರ ಅವಿರತ ಪ್ರಯತ್ನ: ಶಾಸಕ ಹರ್ಷವರ್ಧನ್
ಮೈಸೂರು

ನಂಜನಗೂಡು ಕೊರೊನಾ ಮುಕ್ತ ಮಾಡಲು ಎಲ್ಲರ ಅವಿರತ ಪ್ರಯತ್ನ: ಶಾಸಕ ಹರ್ಷವರ್ಧನ್

June 11, 2021

ಮೈಸೂರು ಮಿತ್ರ: ತಮ್ಮ ಕ್ಷೇತ್ರದಲ್ಲಿ ಕೊರೊನಾ ನಿರ್ವಹಣೆ ಹೇಗಿದೆ?

ಹರ್ಷವರ್ಧನ: ಉತ್ತಮವಾಗಿದೆ. ಅಧಿಕಾರಿಗಳು, ಸ್ವಯಂ ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆ ಯರು ನಂಜನಗೂಡನ್ನು ಕೊರೊನಾ ಮುಕ್ತ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಮಿತ್ರ: ಕೊರೊನಾ ವಾರಿಯರ್ಸ್ ಕಾರ್ಯವೈಖರಿ ಹೇಗಿದೆ?

ಹರ್ಷವರ್ಧನ: ಅಂಗನವಾಡಿ-ಆಶಾ ಕಾರ್ಯಕರ್ತೆ ಯರು ನಿತ್ಯ ಮನೆ-ಮನೆಗೆ ತೆರಳಿ ಸರ್ವೆ ಮಾಡುತ್ತಿದ್ದಾರೆ. ಮುಂಚೂಣಿ ಕೊರೊನಾ ವಾರಿಯರ್ಸ್ ಆಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಗ್ರಾಮೀಣ ಪ್ರದೇಶಕ್ಕೆ ಹೋದಾಗ ಯಾರಿಗಾದರೂ ಜ್ವರ, ಕೆಮ್ಮು ಇದೆಯಾ ಎಂದು ಕೇಳಿದರೆ ಜನರು ಸ್ಪಂದಿಸುತ್ತಿಲ್ಲ. ಜನ ಸ್ಪಂದಿಸಿದರೆ ತಾನೇ ಕ್ಷೇತ್ರವನ್ನು ಕೊರೊನಾ ಮುಕ್ತ ಮಾಡಲು ಸಾಧ್ಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು.

15 ದಿನಗಳ ಹಿಂದೆ ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆ ಶಾಸಕರೊಂದಿಗೆ ಸಭೆ ಆಯೋಜಿಸಿದ್ದರು. ಈ ಸಂದರ್ಭ ಶಾಸಕರು ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿಸಿ ದರು. ನಾನು ನನ್ನ ಸಮಸ್ಯೆ ಪ್ರಸ್ತಾಪಿಸದೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ 3 ತಿಂಗಳಿಂದ ಸಂಬಳ ಆಗಿಲ್ಲ. ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. 2 ದಿನದಲ್ಲಿ ಸಂಬಳ ಬಿಡುಗಡೆ ಮಾಡಿದರು. ಆಶಾ, ಅಂಗನ ವಾಡಿ ಕಾರ್ಯಕರ್ತೆಯರು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ಕರೆದುಕೊಂಡು ಬಂದು, ಚಿಕಿತ್ಸೆಗೊಳ ಪಡಿಸಿದರೆ ಪ್ರತಿ ಪ್ರಕರಣಕ್ಕೆ 5 ರೂ. ಪ್ರೋತ್ಸಾಹ ಧನ ನಿಗದಿಪಡಿಸಿ, ಕಾರ್ಯಕರ್ತೆಯರಿಗೆ ನೀಡಿದರೆ ಅವರಿಗೂ ಸಹಾಯವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ.

ಮಿತ್ರ: ಸೋಂಕಿತರ ಚಿಕಿತ್ಸೆಗೆ ಏನಾದರೂ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದೀರಾ?

ಹರ್ಷವರ್ಧನ: ಕೊರೊನಾ ಮೊದಲ ಅಲೆ ಸಂದರ್ಭ ಜುಬಿಲಿಯಂಟ್ ಕಂಪನಿ ವಿರುದ್ಧ ಹೋರಾಡಿ 50 ಸಾವಿರ ಆಹಾರ ಕಿಟ್ ತರಿಸಿದ್ದೆ. 5 ಸಾವಿರವನ್ನು ಮೈಸೂರಿಗೆ ನೀಡಿ, ಉಳಿದ 45 ಸಾವಿರ ಆಹಾರ ಕಿಟ್‍ಗಳನ್ನು ಕ್ಷೇತ್ರದ ಜನರಿಗೆ ಹಂಚಿದ್ದೆ. 2ನೇ ಅಲೆ ಆರಂಭದಲ್ಲಿ ಸೋಂಕಿತರಿಗೆ ಬೆಡ್ ಸಿಕ್ಕಿದರೆ ಆಕ್ಸಿಜನ್ ಸಿಗುತ್ತಿರಲಿಲ್ಲ. ಈ ವೇಳೆ ತಹಸಿಲ್ದಾರ್‍ಗೆ ನಿರ್ದೇಶನ ನೀಡಿ ಕೈಗಾರಿಕೆಗಳಲ್ಲಿದ್ದ ಆಕ್ಸಿಜನ್ ಸಿಲಿಂಡರ್ ತರಿಸಿ ಪೂರೈಸಿದೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಆಹಾರ ಕಿಟ್ ಬದಲಾಗಿ ಅತ್ಯಂತ ಅವಶ್ಯವಿರುವ ಆಕ್ಸಿಜನ್ ಪ್ಲಾಂಟ್ ನಿರ್ಮಿಸಬೇಕೆಂದು ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದು, ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಶಾಸಕ ಮಿತ್ರರಾದ ಡಾ.ಯತೀಂದ್ರ ಸಿದ್ದರಾಮಯ್ಯ ಜತೆಗೂ ಚರ್ಚಿಸಿದ್ದೇನೆ. ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದೇವೆ.

ಮಿತ್ರ: ಟಾಸ್ಕ್‍ಫೋರ್ಸ್ ಹೇಗೆ ಕಾರ್ಯನಿರ್ವಹಿಸುತ್ತಿದೆ?

ಹರ್ಷವರ್ಧನ: ಗ್ರಾಪಂ ಮಟ್ಟದಲ್ಲಿ ಅಧ್ಯಕ್ಷರು, ಸದಸ್ಯರು, ಪಿಡಿಓಗಳಿಗೆ ಟಾಸ್ಕ್‍ಫೋರ್ಸ್ ಜವಾಬ್ದಾರಿ ನೀಡಿದ್ದು, ಉತ್ತಮ ವಾಗಿ ನಿರ್ವಹಿಸುತ್ತಿದ್ದಾರೆ. ನಾನೂ ಹೋಬಳಿ ಮಟ್ಟದಲ್ಲಿ ಸಭೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಹೇಗೆ ಕಾರ್ಯನಿರ್ವಹಿಸ ಬೇಕೆಂದು ಚರ್ಚಿಸುತ್ತಿದ್ದು, ಕೈಗೊಂಡ ನಿರ್ಧಾರದಂತೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಓ ಹಾಗೂ ಪಕ್ಷದ ಕಾರ್ಯಕರ್ತರು ಸಮನ್ವಯದಿಂದ ಕೊರೊನಾ ಮುಕ್ತ ಮಾಡಲು ಶ್ರಮಿಸುತ್ತಿ ದ್ದಾರೆ. ಜತೆಗೆ ಜನರಿಗೆ ಲಸಿಕೆ ಕೊಡಿಸುವುದು, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸುವುದು, ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದರೆ ಆಂಬುಲೆನ್ಸ್‍ನಲ್ಲಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.

ಮಿತ್ರ: ಕೊರೊನಾ ಹೊರತಾಗಿ ಇತರೆ ಆರೋಗ್ಯ ಸಮಸ್ಯೆ ಇರುವವರಿಗೇನು ವ್ಯವಸ್ಥೆ ಮಾಡಿದ್ದೀರಾ?

ಹರ್ಷವರ್ಧನ: ಇತರೆ ಆರೋಗ್ಯ ಸಮಸ್ಯೆಗೆ, ತುರ್ತು ಚಿಕಿತ್ಸೆಗೆ ವೈದ್ಯರು ಮಾತ್ರ ಲಭ್ಯವಿದ್ದಾರೆ. ಆದರೆ, ವೆಂಟಿ ಲೇಟರ್‍ಗಳಿಲ್ಲ. ಹಾಗಾಗಿ ಗಂಭೀರ ಸಮಸ್ಯೆ ಉಳ್ಳವರನ್ನು ಮೈಸೂರಿಗೆ ಕಳುಹಿಸಲಾಗುತ್ತಿದೆ.

ಮಿತ್ರ: ಕೊರೊನಾ ವಿರುದ್ಧದ ಹೋರಾಟದಲ್ಲಿ ಅಧಿಕಾರಿ ವರ್ಗದ ಸಹಕಾರ ಹೇಗಿದೆ?

ಹರ್ಷವರ್ಧನ: ನಗರಸಭೆ ಅಧ್ಯಕ್ಷರು, ಆಯುಕ್ತರು, ತಹಸಿ ಲ್ದಾರ್, ತಾಪಂ ಇಓ, ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್ ಎಲ್ಲರೂ ಕೊರೊನಾ ನಿಯಂತ್ರಿಸಲು ನಿರಂತರವಾಗಿ ಸಹಕರಿಸುತ್ತಿದ್ದಾರೆ. ಹಾಗಾಗಿಯೇ ಸೋಂಕು ಮತ್ತು ಸಾವಿನ ಪ್ರಕರಣ ಕಡಿಮೆಯಾಗುತ್ತಿವೆ.

ಮಿತ್ರ: ಕೊರೊನಾ ನಿಯಂತ್ರಣದಲ್ಲಿ ಶಾಸಕರಾಗಿ ನಿಮ್ಮ ಪಾತ್ರವೆಷ್ಟಿದೆ?

ಹರ್ಷವರ್ಧನ: ಶಾಸಕನಾಗಿ ಜವಾಬ್ದಾರಿ ಹೆಚ್ಚಿದೆ. ವಾರ ದಲ್ಲಿ 4 ದಿನ ಕ್ಷೇತ್ರದಲ್ಲಿದ್ದು, ಪ್ರತಿ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇನೆ. ಅಲ್ಲೇ ಊಟವನ್ನೂ ಮಾಡುತ್ತಿದ್ದೇನೆ. ಶಾಸಕರ ನಿಧಿಯಿಂದ 65 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಂಬುಲೆನ್ಸ್ ಹಾಗೂ ಮೆಡಿಸಿನ್ ನೀಡಲಾಗುತ್ತಿದೆ. ಒಮ್ಮೆಲೆ ಲಾಕ್‍ಡೌನ್ ಹಿಂಪಡೆದರೆ ಸೋಂಕು ಮತ್ತೆ ಹೆಚ್ಚಾಗುವ ಸಂಭವವಿದೆ. ಹಾಗಾಗಿ ಕಠಿಣ ಮಾರ್ಗಸೂಚಿ ಅನ್ವಯ ಲಾಕ್‍ಡೌನ್ ಸಡಿಲ ಮಾಡಬೇಕು.

ಮಿತ್ರ: ತಾಲೂಕು ಆಡಳಿತಕ್ಕೆ ಜಿಲ್ಲಾಡಳಿತದ ಸಹಕಾರ ಹೇಗಿದೆ?

ಹರ್ಷವರ್ಧನ: ಈ ಮೊದಲು ಜಿಲ್ಲಾಡಳಿತದಿಂದ ಸಹಕಾರ ವಿರಲಿಲ್ಲ. ಆಕ್ಸಿಜನ್ ವಿಷಯಕ್ಕೆ ನನಗೂ ಜಿಲ್ಲಾಧಿಕಾರಿಗಳಿಗೂ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ಕೈಗಾರಿಕೆಗಳಿಂದ ಆಕ್ಸಿಜನ್ ಸಿಲಿಂಡರ್ ತರಿಸಿಕೊಂಡಿದ್ದೆ. ನಂಜನಗೂಡಿನಿಂದ ಮೈಸೂರಿಗೆ ಸೋಂಕಿತರನ್ನು ಕಳುಹಿಸದೆ ಅಲ್ಲೇ ಚಿಕಿತ್ಸೆ ನೀಡು ವಂತೆ ಸೂಚಿಸಿದ್ದರು. ಆದರೆ, ನಮ್ಮ ಕ್ಷೇತ್ರದಲ್ಲೇ ಚಿಕಿತ್ಸೆ ನೀಡಲು ತಜ್ಞ ವೈದ್ಯರಿಲ್ಲ. ವಾರ್ ರೂಂಗೆ ಕರೆ ಮಾಡಿದರೆ ಒಮ್ಮೊಮ್ಮೆ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ, ಅಭಿರಾಂ ಜಿ.ಶಂಕರ್ ಜಿಲ್ಲಾಧಿ ಕಾರಿಯಾಗಿದ್ದಾಗ ಸೋಂಕಿತರನ್ನು ಯಾವ ಆಸ್ಪತ್ರೆಯಲ್ಲಾ ದರೂ ದಾಖಲಿಸಬಹುದಿತ್ತು. ಈಗ ನೂತನ ಜಿಲ್ಲಾಧಿಕಾರಿ ಬಂದಿದ್ದು, ಸುಧಾರಣೆ ತರಲಿದ್ದಾರೆಂಬ ವಿಶ್ವಾಸವಿದೆ.

ಮಿತ್ರ: ಬೆಡ್, ಐಸಿಯು ಸಮಸ್ಯೆ ಹೇಗೆ ನಿಭಾಯಿಸುತ್ತೀರಿ?

ಹರ್ಷವರ್ಧನ: ಸೋಂಕಿನ ಲಕ್ಷಣವಿದ್ದರೆ ಕೂಡಲೇ ಜನರು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿದರೆ ಗುಣ ಪಡಿಸಬಹುದು. ಪರಿಸ್ಥಿತಿ ಕೈ ಮೀರಿದಾಗ ಬಂದರೆ ಐಸಿಯು, ವೆಂಟಿಲೇಟರ್ ಬೆಡ್‍ಗಳಿಲ್ಲದೆ ಪರಿತಪಿಸಬೇಕಾ ಗುತ್ತದೆ. ಇರುವ 2 ಆಕ್ಸಿಜನ್ ಬೆಡ್‍ಗಳನ್ನು ಕೊರೊನಾ ವಾರಿಯರ್ಸ್‍ಗೆಂದೇ ಮೀಸಲಿರಿಸಿದ್ದೇವೆ. ಹಾಗಾಗಿ ಸೋಂಕಿತರನ್ನು ಮೈಸೂರು ಅಥವಾ ಕಡಕೊಳ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗುತ್ತಿದೆ.

ಮಿತ್ರ: ಕೊರೊನಾ 3ನೇ ಅಲೆಗೆ ನೀವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೀರಾ?

ಹರ್ಷವರ್ಧನ: ದುಬೈನಲ್ಲಿ ಮಕ್ಕಳ ಮೇಲಿನ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ಇದೊಂದು ಆಶಾಭಾವನೆ. 3ನೇ ಅಲೆ ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರ ಡಿಸೆಂಬರ್ ಒಳಗೆ ಎಲ್ಲಾ ಮಕ್ಕಳಿಗೂ ಲಸಿಕೆ ನೀಡುವಂತಾಗಬೇಕು. ಆಗ ಮಾತ್ರ ಮಕ್ಕಳನ್ನು 3ನೇ ಅಲೆಯಿಂದ ರಕ್ಷಿಸಬಹುದು.

ಮಿತ್ರ: ನಿಮ್ಮ ಕ್ಷೇತ್ರದಲ್ಲಿ ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆಯೇ?

ಹರ್ಷವರ್ಧನ್: ತಾಲೂಕಲ್ಲಿ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಆದರೆ ಸೋಂಕಿನ ಪ್ರಮಾಣ ಹೆಚ್ಚಿದೆ. ಈವರೆಗೆ 28 ಮಂದಿ ಸಾವನ್ನಪ್ಪಿದ್ದಾರೆ. ಮೃತ ಕುಟುಂಬ ಗಳಿಗೆ ವೈಯಕ್ತಿಕವಾಗಿ 10 ಸಾವಿರ ರೂ. ನೀಡುತ್ತಿದ್ದೇನೆ.

ಮಿತ್ರ: ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?

ಹರ್ಷವರ್ಧನ್: ಕಲಬುರಗಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದ ಬಿ.ಶರತ್ ಅವರನ್ನು ಮೈಸೂರು ಡಿಸಿ ವರ್ಗಾವಣೆ ಮಾಡಿದ್ದರು. ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಮತ್ತೆ ವರ್ಗಾವಣೆ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಇಂದು ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಜಟಾಪಟಿ ತಲೆತಗ್ಗಿಸುವ ವಿಚಾರ. ಜಿಲ್ಲಾ ಉಸ್ತುವಾರಿ ಸಚಿವರು ಇಬ್ಬರನ್ನು ಕರೆಸಿ ತಿಳಿ ಹೇಳಬಹುದಿತ್ತು. ಆ ಕೆಲಸವನ್ನೂ ಅವರೂ ಮಾಡಲಿಲ್ಲ.

Translate »