ಪಾಲಿಕೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಆನ್‍ಲೈನ್‍ಗೆ ಒತ್ತು ನೀಡಿ
ಮೈಸೂರು

ಪಾಲಿಕೆ ಆಸ್ತಿ ತೆರಿಗೆ ಸಂಗ್ರಹಕ್ಕೆ ಆನ್‍ಲೈನ್‍ಗೆ ಒತ್ತು ನೀಡಿ

June 10, 2021

ಮೈಸೂರು,ಜೂ.9(ಆರ್‍ಕೆ)- ಕೊರೊನಾ ಲಾಕ್‍ಡೌನ್ ನಿರ್ಬಂಧವಿರುವುದರಿಂದ ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಲು ಒತ್ತು ನೀಡಿ ಎಂದು ಮೈಸೂರು ಮಹಾ ನಗರ ಪಾಲಿಕೆ ನೂತನ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಕಂದಾಯ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಕಚೇರಿಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ 9 ವಲಯ ಕಚೇರಿಗಳ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆಯುಕ್ತರು, ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಕಟ್ಟಡ, ವಸತಿ ಬಡಾವಣೆಗಳು ಹಾಗೂ ರೆವಿನ್ಯೂ ಲೇಔಟ್‍ಗಳಲ್ಲಿ ರುವ ಸ್ವತ್ತುಗಳ ಸಂಖ್ಯೆ, ವಾರ್ಷಿಕ ಪಾವತಿಯಾಗುತ್ತಿದ್ದ ಆಸ್ತಿ ತೆರಿಗೆ, ತೆರಿಗೆ ಸಂಗ್ರಹಿಸಲು ನಿಗದಿಪಡಿಸಿರುವ ಮಾನದಂಡ ಕುರಿತು ಮಾಹಿತಿ ಪಡೆದುಕೊಂಡರು.

ಕೋವಿಡ್ ಮೊದಲ ಅಲೆ, ಲಾಕ್‍ಡೌನ್ ನಿರ್ಬಂಧ ವಿದ್ದಾಗ ಎಷ್ಟು ತೆರಿಗೆ ಸಂಗ್ರಹವಾಗಿತ್ತು? ಆನ್‍ಲೈನ್ ವ್ಯವಸ್ಥೆ ಜಾರಿಗೆ ಬಂದ ನಂತರ ಆಸ್ತಿಗಳ ಮಾಲೀಕರು ಸ್ವಯಂಪ್ರೇರಿತವಾಗಿ ತೆರಿಗೆ ಪಾವತಿಸಲು ಪ್ರೇರೇಪಣೆ ಮಾಡಲಾಗುತ್ತಿದೆಯೇ? ವಿಳಂಬವಾದಲ್ಲಿ ಕೈಗೊಂಡ ಕ್ರಮಗಳೇನು? ಎಂಬ ಬಗ್ಗೆ ಪಾಲಿಕೆಯ ಉಪ ಆಯುಕ್ತ (ಕಂದಾಯ) ನಾಗರಾಜ್ ವಿವರ ನೀಡಿದರು.

ಜೂನ್ 30ರವರೆಗೂ ಶೇ. 5ರ ರಿಯಾಯಿತಿ ನೀಡಿ ರುವುದರಿಂದ ಆಸ್ತಿ ತೆರಿಗೆ ಪಾವತಿಸಲು ಕೊರೊನಾ ಸಂಕಷ್ಟ ಸ್ಥಿತಿಯಲ್ಲೂ ಜನರು ಮುಂದಾಗಿದ್ದರಿಂದ ಜೂ.8 ರವರೆಗೆ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 43 ಕೋಟಿ ರೂ. ಸಂಗ್ರಹವಾಗಿದೆ ಎಂದು ನಾಗರಾಜ್ ಅಂಕಿ ಅಂಶ ನೀಡಿದರು.

ಪ್ರತಿದಿನ ಪ್ರತಿ ವಲಯ ಕಚೇರಿಯಲ್ಲಿ ತಲಾ 2 ರಿಂದ 3 ಲಕ್ಷ ರೂ. ನಂತೆ ತೆರಿಗೆ ಸಂಗ್ರಹವಾಗುತ್ತಿದೆ. ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಸಿಬ್ಬಂದಿ ಮನೆ ಮನೆಗೆ ತೆರಳಿ ತೆರಿಗೆ ವಸೂಲು ಮಾಡಲು ಆಗುತ್ತಿಲ್ಲ ಎಂದೂ ಸ್ಪಷ್ಟನೆ ನೀಡಿದರು. ಆನ್‍ಲೈನ್ ಪಾವತಿಗೆ ಅಗತ್ಯ ಸೌಲಭ್ಯ ಒದಗಿಸಿ, ಸ್ವತ್ತಿನ ಮಾಲೀಕರಿಗೆ ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಆಸ್ತಿ ತೆರಿಗೆ ಪಾವತಿಸಲು ಅನುಕೂಲ ಮಾಡಿಕೊಡಿ. ಈ ಬಗ್ಗೆ ಅನುಮಾನ ಪರಿಹರಿಸಿಕೊಳ್ಳಲು ಜನರು ದೂರವಾಣಿ ಕರೆ ಮಾಡಿದಾಗ ವಿಶ್ವಾಸದಿಂದ ಮಾತನಾಡಿ, ಅಗತ್ಯ ಮಾಹಿತಿ ಒದಗಿಸಿ ಎಂದು ಲಕ್ಷ್ಮೀ ಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ ಖಾತೆ-ಕಂದಾಯ, ಉದ್ದಿಮೆ ರಹದಾರಿ, ನವೀಕರಣ, ನೀರಿನ ಸಂಪರ್ಕ, ಬೀದಿದೀಪ, ಸ್ವಚ್ಛತೆ, ಒಳಚರಂಡಿ ಮೊದಲಾದ ಮೂಲಸೌಲಭ್ಯ ಕಲ್ಪಿಸಿಕೊಡ ಬೇಕು, ಲಾಕ್‍ಡೌನ್ ಸಡಿಲಗೊಂಡು ಚಟುವಟಿಕೆಗಳು ಪುನಾರಂಭಗೊಂಡ ನಂತರ ತೆರಿಗೆ ವಸೂಲಿ ಪ್ರಕ್ರಿಯೆ ತೀವ್ರಗೊಳಿಸಿ ಗುರಿ ಸಾಧಿಸಬೇಕು ಎಂದು ಆಯುಕ್ತರು ಸ್ಪಷ್ಟ ಸೂಚನೆ ನೀಡಿದರು. ವಾರ್ಡ್‍ವಾರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸಿ, ಕಾರ್ಪೊರೇಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ದೂರು ಬಾರದಂತೆ ಕೆಲಸ ಮಾಡಿ ಎಂದೂ ಸಲಹೆ ನೀಡಿದರು.

ಯಾವುದೇ ಜನಪ್ರತಿನಿಧಿ, ನಾಗರಿಕ, ಹಿರಿಯ ನಾಗರಿ ಕರು ಕಚೇರಿಗೆ ಬಂದಾಗ ಅಥವಾ ಸೇವೆ ಬಯಸಿ ದೂರವಾಣಿ ಕರೆ ಮಾಡಿದಾಗ ತಾಳ್ಮೆಯಿಂದ ಮಾತನಾಡಿ ಸೇವೆ ಒದಗಿಸುವ ಮೂಲಕ ಪಾಲಿಕೆಗೆ ಒಳ್ಳೆಯ ಹೆಸರು ತನ್ನಿ. ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆ ಮಾಡಿ ಅವರಿಗೆ ಉತ್ತಮ ಸೌಲಭ್ಯ ಒದಗಿಸುವುದೇ ನಮ್ಮ ಕರ್ತವ್ಯ ಎಂದು ತಿಳಿಯಿರಿ ಎಂದು ಅಧಿಕಾರಿಗಳಿಗೆ ನೀತಿ ಪಾಠ ಹೇಳಿದರು. ಉಪ ಆಯುಕ್ತ ಶಶಿಕುಮಾರ್, ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜ್, ಹೆಚ್ಚುವರಿ ಆಯುಕ್ತ ವಲಯ ಅಧಿಕಾರಿ ಗಳು, ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

Translate »