ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ  ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ
News

ವಾರಾಂತ್ಯಕ್ಕೆ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ

January 25, 2022

ನವದೆಹಲಿ: ಈ ವಾರದ ಅಂತ್ಯದ ವೇಳೆಗೆ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧಾ ತ್ಮಕ ಹರಾಜು ಪ್ರಕ್ರಿಯೆಯ ನಂತರ, ಸರ್ಕಾರವು ಕಳೆದ ವರ್ಷ ಅ.8ರಂದು ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್‍ಗೆ 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಆ ನಂತರ ಅ.11ರಂದು ಟಾಟಾ ಸಮೂಹಕ್ಕೆ ಲೆಟರ್ ಆಫ್ ಇಂಟೆಂಟ್ ಅನ್ನು ನೀಡಲಾಯಿತು. ಇದು ವಿಮಾನಯಾನ ಸಂಸ್ಥೆಯಲ್ಲಿ ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಿತು. ಅ.25ರಂದು ಈ ಒಪ್ಪಂದಕ್ಕೆ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದಕ್ಕೆ ಸಂಬಂಧಿಸಿದ ಉಳಿದ ಔಪಚಾರಿಕತೆ ಗಳು ಮುಂದಿನ ಕೆಲವು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಈ ವಾರದ ಅಂತ್ಯದ ವೇಳೆಗೆ ವಿಮಾನಯಾನವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಒಪ್ಪಂದದ ಭಾಗವಾಗಿ, ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ ಏರ್ ಇಂಡಿಯಾ ಎಸ್‍ಎಟಿಎಸ್‍ನಲ್ಲಿ ಶೇ.50ರಷ್ಟು ಪಾಲನ್ನು ಹಸ್ತಾಂತರಿಸಲಾಗುವುದು.

Translate »