ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

January 25, 2022

ಮೈಸೂರು, ಜ.24(ಪಿಎಂ)-ಮೈಸೂರಿನ ಕಾಂತರಾಜ ರಸ್ತೆಯ ರಾಮಮಂದಿರ ಎದುರು ಅಪಘಾತದಲ್ಲಿ ಯುವನೊಬ್ಬ ಸಾವನ್ನಪ್ಪಿರುವುದಕ್ಕೆ ಇಲ್ಲಿನ ರಸ್ತೆ ದುಸ್ಥಿತಿಯೇ ಕಾರಣ. ಮೈಸೂರು ನಗರ ಮಹಾನಗರ ಪಾಲಿಕೆಯು ನಗರದ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಮೈಸೂರು ಪ್ರಜ್ಞಾವಂತ ವೇದಿಕೆ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಅಪಘಾತ ಸಂಭವಿಸಿದ ಸ್ಥಳದಲ್ಲೇ ಜಮಾಯಿಸಿ, ದ್ವಿಚಕ್ರ ವಾಹನ ಮಲಗಿಸಿದ ಪ್ರತಿಭಟನಾಕಾರರು, ಇಲ್ಲಿ ನಿನ್ನೆ ರಾತ್ರಿ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಇದಕ್ಕೆ ಈ ರಸ್ತೆಯ ದುಸ್ಥಿತಿಯೇ ಕಾರಣ. ನಗರದಾದ್ಯಂತ ಬಹುತೇಕ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದು, ವಾಹನ ಸವಾರರು ಸುಗಮವಾಗಿ ಸಂಚರಿಸಲಾಗದೇ ಪರದಾಡುತ್ತಿದ್ದಾರೆ. ಆದರೂ ನಗರ ಪಾಲಿಕೆ ಜವಾಬ್ದಾರಿ ಮರೆತು ಕಣ್ಣುಮುಚ್ಚಿ ಕುಳಿತಿದೆ ಎಂದು ದೂರಿದರು.

ಕಳೆದ ಎರಡ್ಮೂರು ವರ್ಷಗಳಿಂದ ಮೈಸೂರು ನಗರದ ಬಹುತೇಕ ಮುಖ್ಯ ರಸ್ತೆಗಳೂ ಡಾಂಬರೀಕರಣ ಭಾಗ್ಯ ಕಂಡಿಲ್ಲ. ಇದರಿಂದ ಅಪ ಘಾತಗಳ ಸಂಖ್ಯೆ ಹೆಚ್ಚು ತ್ತಿದ್ದು, ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆ ಗಳಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ರಸ್ತೆಗಳನ್ನು ಸುಸ್ಥಿತಿ ಯಲ್ಲಿಡದೇ ಪಾಲಿಕೆ ನಿರ್ಲಕ್ಷ್ಯ ತಾಳಿದೆ ಎಂದು ಪ್ರತಿ ಭಟನಾ ಕಾರರು ಆರೋಪಿಸಿದರು. ನಗರದ ರಸ್ತೆಗಳ ಗುಂಡಿ ಮುಚ್ಚಲು ಈಗಾಗಲೇ ಅನುದಾನ ನಿಗದಿಯಾಗಿದ್ದು, ಕೂಡಲೇ ಅನುದಾನ ಬಿಡುಗಡೆಗೊಳಿಸಿ, ದುರಸ್ತಿ ಕಾಮಗಾರಿಗೆ ಚಾಲನೆ ನೀಡಬೇಕು. ನಿನ್ನೆ ರಾತ್ರಿ ಅಪಘಾತದಿಂದ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಪಾಲಿಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕೆಆರ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಮುಖಂಡರಾದ ವಿಕ್ರಂಅಯ್ಯಂಗಾರ್, ಜಿ.ರಾಘ ವೇಂದ್ರ, ವಿನಯ್ ಕಣಗಾಲ್, ಎಸ್.ಎನ್.ರಾಜೇಶ್, ಚೇತನ್, ಕಾಂತರಾಜು, ಶ್ರೀಕಾಂತ್ ಕಶ್ಯಪ್, ಯೋಗಿಶ್, ಹರೀಶ್ ನಾಯ್ಡು, ಕೆಫೆ ಪ್ರಸಾದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »