ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಡ ಪಕ್ಷಗಳ ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಡ ಪಕ್ಷಗಳ ಪ್ರತಿಭಟನೆ

January 25, 2022

ಮೈಸೂರು, ಜ.24(ಪಿಎಂ)- ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ಲಾಕ್‍ಡೌನ್‍ನಿಂದ ಸಂತ್ರಸ್ತರಾದವ ರಿಗೆ ಸೂಕ್ತ ಪರಿಹಾರ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ಒತ್ತಾಯಿಸಿ ಎಡ-ಪ್ರಜಾಪ್ರಭುತ್ವ ವಾದಿ ಪಕ್ಷಗಳ ವತಿಯಿಂದ ನಗರದಲ್ಲಿ ಸೋಮವಾರ ಪಕ್ಷಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಅಲ್ಲದೆ, ಆಯಾಯ ಪಕ್ಷಗಳು ಮುಖಂ ಡರು ಹಾಗೂ ಹಲವು ಸಾರ್ವಜನಿಕರು ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸಿ ದರು. ಸಿಪಿಐ (ಎಂ), ಸಿಪಿಐ, ಎಸ್‍ಯು ಸಿಐ(ಸಿ), ಸಿಪಿಐ(ಎಂಎಲ್), ಎಐಎಫ್‍ಬಿ, ಆರ್‍ಪಿಐ ಮತ್ತು ಸ್ವರಾಜ್ ಇಂಡಿಯಾ ಪಕ್ಷಗಳು ರಾಜ್ಯವ್ಯಾಪಿ ಈ ಪ್ರತಿಭಟನೆ ಸಂಘಟಿಸಿದ್ದವು. ಅಂತೆಯೇ ಮೈಸೂರು ನಗರದಲ್ಲೂ ಪ್ರತಿಭಟನೆ ನಡೆಸಲಾಯಿತು.

ಕೋವಿಡ್ 3ನೇ ಅಲೆ ತಡೆಗೆ ಸೂಕ್ತ ಕ್ರಮ ವಹಿಸಬೇಕು. ಮನೆ ಆರೈಕೆಯಲ್ಲಿರು ವವರಿಗೆ ಅಗತ್ಯ ನೆರವು ನೀಡಬೇಕು. ಕೋವಿಡ್ ಸೋಂಕಿತರಿಗೆ ಉಚಿತ, ಗುಣಮಟ್ಟದ ಚಿಕಿತ್ಸೆ ಒದಗಿಸಿ, ಮೃತಪಟ್ಟವರ ಕುಟುಂ ಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡ ಬೇಕು. ಕೋವಿಡ್ ಯೋಧರಿಗೆ ಜೀವನ ಭದ್ರತೆ ಒದಗಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬ ಗಳಿಗೆ ತಲಾ 10 ಸಾವಿರ ರೂ. ನೀಡಿ, ಅವರ ಕೊಳ್ಳುವ ಶಕ್ತಿ ಹೆಚ್ಚಿಸಬೇಕು. ಎಲ್ಲಾ ಕುಟುಂಬ ಗಳಿಗೆ ಪಡಿತರ ಸಾಮಗ್ರಿ ವಿತರಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸ ಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ದಿನಗಳ ಕೆಲಸ ನೀಡಬೇಕು. ಜೊತೆಗೆ ಕೂಲಿಯನ್ನು 600 ರೂ.ಗೆ ಹೆಚ್ಚಳ ಮಾಡ ಬೇಕು. ಉದ್ಯೋಗ ಖಾತ್ರಿ ನಗರ ಪ್ರದೇಶಕ್ಕೆ ವಿಸ್ತರಿಸ ಬೇಕು. ಶಾಲಾ-ಕಾಲೇಜು ಶುಲ್ಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಕೆ: ಪ್ರತಿಭಟನೆ ಬಳಿಕ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದರು. ಎಸ್‍ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸ್ವರಾಜ್ ಇಂಡಿಯಾ ಜಿಲ್ಲಾ ಮುಖಂಡ ಉಗ್ರ ನರಸಿಂಹೇಗೌಡ ಮತ್ತಿತರರು ಡಿಸಿಯವರಿಗೆ ಮನವಿ ಸಲ್ಲಿಸಿದರು.

Translate »