ಮೈಸೂರು, ಸೆ. 21(ಆರ್‍ಕೆ)- ಕಳೆದ ಶನಿವಾರದಿಂದ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡ ಎಚ್ಚರಿಕೆ ನೀಡಿದ್ದಾರೆ.
ತಂತ್ರಜ್ಞಾನ ಬಳಸಿಕೊಂಡು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಭಾಗಿಯಾಗುತ್ತಿರುವ ಕುರಿತಂತೆ ಮುಂಜಾಗ್ರತಾ ಕ್ರಮಕ್ಕಾಗಿ ಈಗಾಗಲೇ ಮೈಸೂರು ನಗರದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾ ಗಿದ್ದು, ಎಲ್ಲಾ ಪೊಲೀಸ್ ಠಾಣೆಗಳ ವಿಶೇಷ ವಿಭಾಗ (ಎಸ್‍ಬಿ)ದ ಸಿಬ್ಬಂದಿ ಆಯಾ ಠಾಣಾ ಸರಹದ್ದಿನಲ್ಲಿ ಗಸ್ತು ನಡೆಸುತ್ತಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿರುವ ಒಂಟಿ ಮನೆಗಳು, ಅಪಾರ್ಟ್‍ಮೆಂಟ್ ಗಳು, ವಸತಿ ಗೃಹಗಳು ಹಾಗೂ ಸರ್ವೀಸ್ ಅಪಾರ್ಟ್‍ಮೆಂಟ್‍ಗಳಲ್ಲಿ ತೀವ್ರ ನಿಗಾ ವಹಿಸುತ್ತಿದ್ದು, ಬೆಟ್ಟಿಂಗ್ ದಂಧೆ ಪತ್ತೆಗಾಗಿ ವಿಶೇಷ ತನಿಖಾ ತಂಡದ ಸಿಬ್ಬಂದಿ ಮಫ್ತಿಯಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಯಾ ಉಪವಿಭಾಗದ ಎಸಿಪಿ ಯವರು ಅದರ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ನಿತ್ಯ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಪೋಷಕರೂ ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಪಾಲ್ಗೊಳ್ಳದಂತೆ ತಿಳಿವಳಿಕೆ ಹೇಳಬೇಕು ಹಾಗೂ ಸಾರ್ವಜನಿಕರು ಇಂತಹ ಸುಳಿವು ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ಮುಂಜಾಗ್ರತೆಗಾಗಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದ ಅವರು, ಕ್ರಿಕೆಟ್ ದಂಧೆಯಲ್ಲಿ ಪಾಲ್ಗೊಂಡ ಯುವಕರು ಹಣ ಕಳೆದುಕೊಂಡು ಅದರಿಂದ ಹಲವು ಅಪರಾಧ ಕೃತ್ಯಗಳು ನಡೆಯಲು ಕಾರಣರಾಗುತ್ತಾರೆ. ಆದ್ದರಿಂದ ಅಂತಹ ಕೃತ್ಯವನ್ನು ತಡೆಯುವ ಸಲುವಾಗಿ ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಅಕ್ರಮವಾಗಿ ಕೂಟ ರಚಿಸಿಕೊಂಡು ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಿ ಸಿಕ್ಕಿಬಿದ್ದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದೂ ಡಾ. ಪ್ರಕಾಶ್‍ಗೌಡ ಸಲಹೆ ನೀಡಿದ್ದಾರೆ.