ಮೈಸೂರು, ಸೆ.21(ಆರ್‍ಕೆ)-ಮೈಸೂರಿನ ನಿವೇದಿತಾನಗರದಲ್ಲಿ ಭಾನುವಾರ ಸಂಜೆ ನಡೆದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಹತ್ಯೆ ಪ್ರಕರಣ ಸಂಬಂಧ ಪೊಲೀಸರಿಗೆ ಕೆಲ ಮಹತ್ವದ ಸುಳಿವು ಪತ್ತೆಯಾಗಿದೆ. ಇಬ್ಬರು ಪರಶಿವಮೂರ್ತಿ ಅವರ ಮನೆ ಒಳಗೆ ಹೋಗಿ, ಹೊರಬಂದಿ ರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಫುಟೇಜಸ್ ಸಹಾಯ ದಿಂದ ಕೊಲೆಗೆ ಸಂಬಂಧಿಸಿದ ಕೆಲ ಸುಳಿವು ಪತ್ತೆಯಾಗಿದ್ದು, ಕುವೆಂಪು ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ತನಿಖೆಗಾಗಿ ಸರಸ್ವತಿಪುರಂ ಠಾಣೆ ಇನ್‍ಸ್ಪೆಕ್ಟರ್ ವಿಜಯಕುಮಾರ್ ನೇತೃತ್ವದಲ್ಲಿ ರಚಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಸಿಸಿ ಕ್ಯಾಮರಾ ಫುಟೇಜಸ್ ಸುಳಿವಿನ ಆಧಾರದ ಮೇಲೆ ಶೋಧನಾ ಕಾರ್ಯ ಮುಂದುವರಿದಿದ್ದು, ಈ ಸಂಬಂಧ ಈಗಾಗಲೇ ಶಂಕಿತ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರಶಿವಮೂರ್ತಿ ಅವರು ಸೇವೆಯಿಂದ ನಿವೃತ್ತಿಯಾದ ನಂತರ ಹಣಕಾಸು ಲೇವಾದೇವಿ ಮಾಡುತ್ತಿದ್ದರಲ್ಲದೆ, ನಿವೇಶನ ಹಾಗೂ ಮನೆಗಳನ್ನು ಮಾರಾಟ ಮಾಡಿಸುವ ವ್ಯವಹಾರದಲ್ಲೂ ನಿರತರಾಗಿದ್ದರು. ಜೊತೆಗೆ ಸಾಂಸಾರಿಕ ಕಲಹದಿಂದ ಪತ್ನಿಯಿಂದ ಬೇರ್ಪಟಿದ್ದ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು ಎಂಬುದು ತನಿಖಾ ತಂಡದ ಪೊಲೀಸರಿಗೆ ತಿಳಿದುಬಂದಿದೆ. ಹಣಕಾಸು ವ್ಯವಹಾರ ಅಥವಾ ಸಾಂಸಾರಿಕ ಕಲಹ ಪರಶಿವಮೂರ್ತಿ ಅವರ ಹತ್ಯೆಗೆ ಕಾರಣವಾಗಿರಬಹುದೇ ಹೊರತು ಅವರನ್ನು ದೋಚುವ ಉದ್ದೇಶದಿಂದಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿರುವುದರಿಂದ ಒಂದೆರಡು ದಿನದಲ್ಲಿ ಪರಶಿವಮೂರ್ತಿ ಅವರ ಹತ್ಯೆ ಆರೋಪಿಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೈಸೂರು