ಮೈಸೂರು, ಸೆ. 21(ಎಂಟಿವೈ)- ಸಮು ದಾಯಕ್ಕೆ ಹಬ್ಬಿರುವ ಕೊರೊನಾ ಸೋಂಕು ಮತ್ತಷ್ಟು ವೇಗವಾಗಿ ಹರಡುತ್ತಿದ್ದು, ಸೋಂಕಿನ ಸರಪಳಿ ತಡೆಗಟ್ಟಲು ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಪಕ್ಷ `ಆರೋಗ್ಯ ಹಸ್ತ’ ಜಾರಿಗೆ ತರುವ ಮೂಲಕ ಜನರ ಹಿತ ಕಾಯುತ್ತಿದೆ ಎಂದು ಮಾಜಿ ಸಂಸದ, ಆರೋಗ್ಯ ಹಸ್ತ ಕಾರ್ಯಕ್ರಮದ ರಾಜ್ಯ ಉಸ್ತುವಾರಿ ಆರ್.ದ್ರುವನಾರಾಯಣ್ ತಿಳಿಸಿದ್ದಾರೆ.
ಮೈಸೂರಿನ ಅಗ್ರಹಾರ ಸಮೀಪದಲ್ಲಿ ಎಂ.ಜಿ. ರಸ್ತೆ ಬಳಿಯಿರುವ ಮದುವನ ಬಡಾ ವಣೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಸೋಮ ವಾರ ಆಯೋಜಿಸಿದ್ದ ಕೆ.ಆರ್.ವಿಧಾನ ಸಭಾ ಕ್ಷೇತ್ರದ `ಆರೋಗ್ಯ ಹಸ್ತ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಕೊರೊನಾ ನಿಯಂ ತ್ರಣಕ್ಕೆ ಮಾಡದ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಾ ದ್ಯಂತ ಹಮ್ಮಿಕೊಳ್ಳುವ ಮೂಲಕ ರಾಜ್ಯದ ಜನತೆಯ ಹಿತ ಕಾಯಲು ಮುಂದಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂ ತ್ರಣ ಮಾಡುವುದರಲ್ಲಿ ಸರ್ಕಾರ ವಿಫಲ ವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ಮರಣದ ಪ್ರಮಾಣವೂ ಹೆಚ್ಚು ತ್ತಿದೆ. ದೇಶದಲ್ಲಿ ಕರ್ನಾಟಕ ಸೋಂಕಿತರ ಸಂಖ್ಯೆ ಹಾಗೂ ಸೋಂಕಿಗೆ ಬಲಿಯಾ ದವರ ಸಂಖ್ಯೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಕೋವಿಡ್ ವಿಚಾರದಲ್ಲಿ ಸರ್ಕಾರ ಗೊಂದಲದಲ್ಲಿ ಸಿಲುಕಿದೆ. ಉಪಮುಖ್ಯ ಮಂತ್ರಿ ಅಶ್ವಥ್‍ನಾರಾಯಣ್, ಸಚಿವ ರಾದ ಆರ್.ಅಶೋಕ್, ಡಾ.ಸುಧಾಕರ್, ಶ್ರೀರಾಮುಲು ಕೊರೊನಾ ಸಂಬಂಧ ಬಿನ್ನ ಹೇಳಿಕೆ ನೀಡುತ್ತಿದ್ದಾರೆ. ಯಾರು ಸರಿಯಾದ ಮಾಹಿತಿ ನೀಡುತ್ತಾರೆ ಎಂಬ ಗೊಂದಲ ದಲ್ಲಿ ಜನರು ಸಿಲುಕಿದ್ದಾರೆ ಎಂದು ಧ್ರುವನಾರಾಯಣ್ ವಿಷಾದಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿಕಿತ್ಸಾ ಸೌಲಭ್ಯವಿಲ್ಲದೆ ಜನರು ಪರ ದಾಡುವಂತಾಗಿದ್ದಾರೆ. ಕೆ.ಆರ್.ವಿಧಾನ ಸಭಾ ಕ್ಷೇತ್ರದಲ್ಲೂ ಜನರು ಸೋಂಕಿಗೆ ತತ್ತರಿಸುತ್ತಿದ್ದಾರೆ. ಇದನ್ನು ಮನಗಂಡು ಕ್ಷೇತ್ರದ ಜನರ ಆರೋಗ್ಯ ಕಾಪಾಡುವು ದರೊಂದಿಗೆ ಸೋಂಕಿನಿಂದ ಪಾರು ಮಾಡಲು ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಮನೆ ಮನೆ ಬಾಗಿಲಿಗೆ ಕೊಂಡೊಯ್ದು ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈ ಅಭಿಯಾನದಲ್ಲಿ ಯಾರಿಗಾದರೂ ಕೊರೊನಾ ಲಕ್ಷಣ ಕಂಡು ಬಂದರೆ, ದೇಹದ ಉಷ್ಣಾಂಶ, ಉಸಿರಾಟದ ಪ್ರಮಾಣ ತಪಾ ಸಣೆ ಮಾಡಿ ಅನುಮಾನ ಬಂದರೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಂದಿ ನಿಂದ ಕೆ.ಆರ್.ಕ್ಷೇತ್ರದ ಎಲ್ಲೆಡೆ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡ ಲಾಗುತ್ತದೆ. ಇದಕ್ಕಾಗಿ ನುರಿತ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿ.ಸೋಮಶೇಖರ್, ಮೈಲಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕ ಟೇಶ್, ಕೆಪಿಸಿಸಿ ಸದಸ್ಯ ಶ್ರೀನಾಥ್ ಬಾಬು, ಮುಖಂಡರಾದ ಡೈರಿ ವೆಂಕಟೇಶ್, ರಮೇಶ್, ಯೋಗೇಶ್, ಗುಣಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.