ಮೈಸೂರು, ಮೇ20(ಆರ್‍ಕೆ)- ಮೈಸೂರು ಭಾಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಎರಡನೇ ದಿನವೂ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳವಾರದಿಂದ ರಾಜ್ಯದಾದ್ಯಂತ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿದ್ದು, ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಬಸ್ ಗಳು ಸಂಚರಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕ ರಿಲ್ಲದೆ ಸಂಸ್ಥೆ ಆದಾಯ ಖೋತಾ ಆಗುವ ಸಾಧ್ಯತೆ ಇದೆ.
ಮಂಗಳವಾರ ಮೈಸೂರು ನಗರ ಬಸ್ ನಿಲ್ದಾಣ ದಿಂದ ಬೆಳಿಗ್ಗೆ 7ರಿಂದ ಸಂಜೆ 7ಗಂಟೆವರೆಗೆ 69 ಬಸ್ಸು ಗಳು ಸಂಚರಿಸಿದ್ದವು. ಇಂದು ಮಧ್ಯಾಹ್ನದವರೆಗೆ 57 ಬಸ್ ಗಳು ಸಂಚರಿಸಿದವು. ಒಂದು ಬಸ್ಸಿನಲ್ಲಿ ಕೇವಲ 30 ಮಂದಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆಯಾದರೂ, ಸರಾಸರಿ ಒಂದು ಬಸ್‍ನಲ್ಲಿ 15 ಮಂದಿಯಂತೆ ಪ್ರಯಾ ಣಿಸಿದಂತಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ. ನಾಗರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ನಾವು ಎಷ್ಟೇ ಪ್ರಯಾಣಿಕರು ಬಂದರೂ ಅವರ ಸಂಚಾರಕ್ಕೆ ಅಗತ್ಯ ಬಸ್ಸುಗಳು, ಡ್ರೈವರ್, ಕಂಡಕ್ಟರ್‍ಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ ಜನ ಸಂಚಾರವೇ ವಿರಳ. ನಷ್ಟವಾದರೂ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸುಗಳನ್ನು ಓಡಿಸುತ್ತಿದ್ದೇವೆ ಎಂದರು.
ಇನ್ನು ಸಬರ್ಬನ್ ಬಸ್ ನಿಲ್ದಾಣದಿಂದ ಮಂಗಳವಾರ 156 ಬಸ್ಸುಗಳು ವಿವಿಧೆಡೆ ಪ್ರಯಾಣ ಬೆಳೆಸಿದ್ದವು. 2ನೇ ದಿನವಾದ ಇಂದು ಮಧ್ಯಾಹ್ನ 1 ಗಂಟೆವರೆಗೆ 78 ಬಸ್ಸುಗಳು, ಸಂಜೆ ವೇಳೆಗೆ ಸುಮಾರು 250 ಬಸ್ಸುಗಳು ಸಂಚರಿಸಿದವು ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾ ಗೀಯ ನಿಯಂತ್ರಣಾಧಿಕಾರಿ ಅಶೋಕ್‍ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸಂಚರಿಸಿದ ಬಹುತೇಕ 55 ಬಸ್ಸುಗಳು ಬೆಂಗಳೂರು ಮಾರ್ಗ ಸಂಚರಿಸಿದ್ದವು. ಇಂದೂ ಸಹ ಬೆಂಗಳೂರಿಗೆ ಗರಿಷ್ಠ ಪ್ರಯಾಣಿಕರು ಸಂಚರಿಸಿದ್ದಾರೆ ಎಂದ ಅವರು, ಎರಡನೇ ದಿನವಾದ ಇಂದು ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೆ ಬಸ್ ಸೇವೆ ಕಲ್ಪಿಸಲಾಯಿತು ಎಂದು ತಿಳಿಸಿದರು.
ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಮೈಸೂರಿನಲ್ಲಿ ಸಿಲುಕಿದ್ದವರು ಮಾತ್ರ ಈಗ ತಮ್ಮ ತಮ್ಮ ಊರುಗಳಿಗೆ ಸಾರಿಗೆ ಬಸ್‍ಗಳಲ್ಲಿ ಕುಟುಂಬದೊಂದಿಗೆ ಹಿಂದಿರುಗು ತ್ತಿದ್ದಾರೆ. ಇವರೆಲ್ಲ ತೆರಳಿದ ನಂತರ ಮಾಮೂಲಿ ಪ್ರಯಾಣಿಕರು ಸಂಚರಿಸಬೇಕು. ಇಲ್ಲದಿದ್ದರೆ ಬಸ್‍ಗಳು ಖಾಲಿ ಖಾಲಿ ಸಂಚರಿಸುವ ಸಾಧ್ಯತೆ ಇದೆ ಎಂದರು.
ಮೈಸೂರು ನಗರದ 3 ಡಿಪೋ ಸೇರಿದಂತೆ ಕೆ.ಆರ್. ನಗರ, ಹುಣಸೂರು, ಹೆಚ್.ಡಿ.ಕೋಟೆ ಹಾಗೂ ಪಿರಿಯಾ ಪಟ್ಟಣ ಡಿಪೋಗಳಿಂದ ಮಂಗಳವಾರ ಕೇವಲ 2.5 ಲಕ್ಷ ರೂ. ಪ್ರಯಾಣ ಶುಲ್ಕ ಆದಾಯ ಸಂಗ್ರಹವಾಗಿದೆ.
ಕೊರೊನಾ ಸೋಂಕಿನ ಎಚ್ಚರಿಕಾ ಕ್ರಮವಾಗಿ ಒಂದು ಬಸ್ಸಿನಲ್ಲಿ ಕೇವಲ 30 ಮಂದಿ ಮಾತ್ರ ಪ್ರಯಾಣಿಸಲು ಅವ ಕಾಶವಿರುವುದರಿಂದ ಸಂಸ್ಥೆಗೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದೂ ಅಶೋಕ್‍ಕುಮಾರ್ ತಿಳಿಸಿದರು.
ರಸ್ತೆಗಳಲ್ಲಿ ಜನ ಸಂಚಾರ ಎಂದಿನಂತಿದೆಯಾದರೂ, ಸಾರಿಗೆ ಬಸ್ ನಿಲ್ದಾಣಗಳು ಮಾತ್ರ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ. ಲಾಕ್‍ಡೌನ್ ನಿರ್ಬಂಧ ತೆರವು ಗೊಳಿಸಿ, ಎಲ್ಲಾ ಚಟುವಟಿಕೆಗಳು ಆರಂಭವಾಗುವವರೆಗೂ ಕೆಎಸ್‍ಆರ್ ಟಿಸಿ ಬಸ್ಸುಗಳು ಖಾಲಿ ಸಂಚರಿಸುವ ಸಾಧ್ಯತೆ ಇದೆ.