ಬೆಂಗಳೂರು,ಡಿ.13-ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಹೊರತು ಪಡಿಸಿ, ಉಳಿದೆಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಪ್ರಮುಖ ಬೇಡಿಕೆ ಈಡೇರದ ಕಾರಣ ಸಂಧಾನ ವಿಫಲವಾಗಿದ್ದು, ಮುಷ್ಕರ ಮುಂದುವರೆಸು ವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಾರಿಗೆ ನೌಕರರ ಒಕ್ಕೂಟ ಘೋಷಿಸಿದೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಭಾನುವಾರ ಕೆಎಸ್‍ಆರ್‍ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಸಂಧಾನದ ಮಾತುಕತೆ ನಡೆಸಿದರು. ಸಂಧಾನ ಸಭೆ ಮುಗಿದ ನಂತರ ಹೊರ ಬಂದ ಚಂದ್ರಶೇಖರ್, ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಮಾತ್ರ ಈಡೇರಿಲ್ಲ. ಆದರೆ ಮುಂದಿನ ದಿನಗಳಲ್ಲಿ ಆ ಬೇಡಿಕೆಯೂ ಕೂಡ ಈಡೇರುತ್ತದೆ ಎಂಬ ಭರವಸೆ ಇದೆ. ಸಂಧಾನ ಯಶಸ್ವಿಯಾಗಿದೆ. ಮುಷ್ಕರ ಅಂತ್ಯವಾಗಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.
ಆದರೆ ಫ್ರೀಡಂ ಪಾರ್ಕ್‍ಗೆ ಬಂದು ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಚರ್ಚಿಸಿದ ನಂತರ ಸಂಧಾನ ವಿಫಲವಾಗಿದೆ. ಮುಷ್ಕರ ಮುಂದುವರೆಯಲಿದೆ ಎಂದು ಘೋಷಿಸಿ ದರು. ರಾಜ್ಯ ಸರ್ಕಾರವು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸಲಾಗದು ಎಂದು ತಿಳಿಸಿತ್ತಾದರೂ, ಉಳಿದ 8 ಬೇಡಿಕೆಗಳಿಗೆ ಅಸ್ತು ಎಂದಿತ್ತು. ನಿಗಮದ ನೌಕರರು ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸುವುದು, ಕೊರೊನಾದಿಂದ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವುದು, ಅಂತರ ನಿಗಮ ವರ್ಗಾವಣೆ ಸಂಬಂಧ ಸೂಕ್ತ ನೀತಿ ರಚಿಸುವುದು, ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸು ವುದು, ನೌಕರರಿಗೆ ಕಿರುಕುಳ ತಡೆಯಲು ಹೆಚ್‍ಆರ್‍ಎಂಎಸ್ (ಮಾನವ ಸಂಪನ್ಮೂಲ ವ್ಯವಸ್ಥೆ) ಜಾರಿ ಮಾಡುವುದು, 2020ರ ಜನವರಿಯಿಂದ ವೇತನ ಪರಿಷ್ಕರಣೆ ಆಗದ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗ ಜಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡುವುದು ಮುಂತಾದ ಬೇಡಿಕೆಗಳಿಗೆ ಸರ್ಕಾರ ಒಪ್ಪಿತ್ತು.
ಈ ಹಿನ್ನೆಲೆಯಲ್ಲಿ ಸಂಧಾನ ಯಶಸ್ವಿಯಾಗಿದೆ ಎಂದು ಕೆಎಸ್‍ಆರ್‍ಟಿಸಿ ನೌಕರರ ಒಕ್ಕೂಟದ ಮುಖಂಡರು ಘೋಷಿಸಿದ್ದರು. ಈ ಘೋಷಣೆ ಹೊರ ಬೀಳುತ್ತಿದ್ದಂತೆಯೇ ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ನೌಕರರು ಸಿಹಿ ಹಂಚಿ ಸಂಭ್ರಮಿಸಿದರು. ಬೆಂಗಳೂರು, ಮೈಸೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬಸ್ ಸಂಚಾರ ಪ್ರಾರಂಭವಾಯಿತು. ಆದರೆ ಮುಷ್ಕರ ಮುಂದುವರೆಯುವುದು ಎಂದು ಫ್ರೀಡಂ ಪಾರ್ಕ್‍ನಲ್ಲಿ ಘೋಷಣೆ ಮಾಡಿದ ನಂತರ ಬಸ್ ಸಂಚಾರ ಸ್ಥಗಿತವಾಯಿತು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಾರಿಗೆ ನೌಕರರ ಒಕ್ಕೂಟ ಮುಷ್ಕರ ಮುಂದುವರೆಯುತ್ತದೆ ಎಂದು ಘೋಷಿಸಿದ್ದರೆ, ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿ ಯೂನಿಯನ್, ಸಂಧಾನ ಯಶಸ್ವಿಯಾಗಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ನೌಕರರಿಗೆ ಕರೆ ನೀಡಿದೆ.
ಎರಡು ಸಂಘಟನೆಗಳ ವಿಭಿನ್ನ ನಿಲುವಿನಿಂದ ಸಾರಿಗೆ ನೌಕರರಲ್ಲಿ ಗೊಂದಲ ಸೃಷ್ಟಿಯಾಗಿದೆ. ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಿರುವುದಾಗಿ ಸಚಿವರುಗಳು ಹೇಳುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಭದ್ರತೆ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ನಾಳೆ ಮುಷ್ಕರ ಮುಂದುವರೆಯುವುದೇ ಅಥವಾ ಸಾರಿಗೆ ಬಸ್‍ಗಳು ಸಂಚರಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಖಾಸಗಿ ಬಸ್ ಸಂಚಾರ ಸ್ಥಗಿತ ಇಲ್ಲ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟ ಸ್ಪಷ್ಟನೆ
ಮೈಸೂರು, ಡಿ.13(ಎಂಕೆ)- ಖಾಸಗಿ ಬಸ್‍ಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀ ಕರ ಒಕ್ಕೂಟದ ಅಧ್ಯಕ್ಷ ರಾಜವರ್ಮಾ ಬಲ್ಲಾಳ್ ತಿಳಿಸಿದ್ದಾರೆ. ಕೆಎಸ್‍ಆರ್‍ಟಿಸಿ ನೌಕರರ ಪ್ರತಿ ಭಟನೆಗೆ ಬೆಂಬಲ ಸೂಚಿಸಿ, ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸುವುದಾಗಿ ಹೇಳಿರು ವುದು ಟೂರಿಸ್ಟ್ ಬಸ್‍ಗಳ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಎಂಬುವರು. ಅವರಿಗೂ ರೂಟ್‍ಗಳಲ್ಲಿ ಸಂಚರಿಸುವ ಖಾಸಗಿ ಬಸ್‍ಗಳ ಮಾಲೀಕರ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಎಂದಿನಂತೆ ರಾಜ್ಯದಲ್ಲಿ ಖಾಸಗಿ ಬಸ್‍ಗಳ ಸಂಚಾರವಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸುಮಾರು 9 ಸಾವಿರ ಖಾಸಗಿ ಬಸ್‍ಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಬಸ್‍ಗಳು ಸಂಚರಿಸುತ್ತಿವೆ.
ರಾಜ್ಯ ಸರ್ಕಾರ ಜೊತೆಗೆ ಖಾಸಗಿ ಬಸ್ ಮಾಲೀಕರು ಸದಾ ಇದ್ದಾರೆ. ನಾಳೆ(ಡಿ.14) ಸಂಜೆ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದು, ಏನಾದರೂ ಖಾಸಗಿ ಬಸ್‍ಗಳನ್ನು ಬಳಕೆ ಮಾಡಿಕೊಳ್ಳುವು ದಾಗಿ ತಿಳಿಸಿದರೆ, ನಮಗೂ ಕಷ್ಟವಾಗಲಿದೆ. ಅಷ್ಟೊಂದು ಬಸ್‍ಗಳು ನಮ್ಮಲ್ಲಿಯೂ ಇಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಖಾಸಗಿ ಬಸ್‍ಗಳ ವಿಧಿಸುವ ಮೂರು ತಿಂಗಳ ಸಾರಿಗೆ ಶುಲ್ಕವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ಅದರಂತೆ ಸರ್ಕಾರ ಸಮ್ಮತಿ ನೀಡಿದರೆ ಸರ್ಕಾರದೊಂದಿಗೆ ಸ್ಪಂದಿಸುವ ಪ್ರಯತ್ನ ಮಾಡಲಾಗುವುದು. ಆದರೆ, ಮುಷ್ಕರ ನಡೆಸು ತ್ತಿರುವ ಕೆಎಸ್‍ಆರ್‍ಟಿಸಿ ನೌಕರರು ಪ್ರತಿಭಟನೆ ನಿಲ್ಲಿಸಿ ವಾಪಸ್ಸಾದರೆ ಮತ್ತೆ ಸಂಕಷ್ಟ ಎದುರಾಗ ಲಿದೆ. ಆದ್ದರಿಂದ ನಾಳೆ ನಡೆಯುವ ಸಭೆಯ ಬಳಿಕ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಪ್ರತಿಕ್ರಿಯಿಸಿದರು. ಮೈಸೂರು ಜಿಲ್ಲೆ ಯಲ್ಲಿ ಸುಮಾರು 140 ಖಾಸಗಿ ಬಸ್‍ಗಳಿದ್ದು, ಅದರಲ್ಲಿ 50 ಬಸ್‍ಗಳು ಸಂಚರಿಸುತ್ತಿವೆ. ಮೈಸೂರು, ಟಿ.ನರಸೀಪುರ, ಮಹದೇಶ್ವರ ಬೆಟ್ಟ ಇನ್ನಿತರೆ ಮಾರ್ಗವಾಗಿ ಸಂಚರಿಸುವ ರೂಟ್ ಬಸ್ ಬಸ್‍ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ.ಶಿವಲಿಂಗು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
ಯಡಿಯೂರಪ್ಪರಿಂದ ತುರ್ತು ಸಭೆ
ಬೆಂಗಳೂರು,ಡಿ.13-ಸಾರಿಗೆ ನೌಕರರ ಮುಷ್ಕರ ವಿಫಲ ಎಂಬ ಘೋಷಣೆ ಫ್ರೀಡಂ ಪಾರ್ಕ್‍ನಲ್ಲಿ ಹೊರಬೀಳುತ್ತಿ ದ್ದಂತೆಯೇ ಭಾನುವಾರ ಸಂಜೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿ ವರು ಹಾಗೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಮುಷ್ಕರ ನಿರತ ಸಾರಿಗೆ ನೌಕರರ ಮುಖಂಡರೊಂದಿಗೆ ಮಾತುಕತೆ ನಡೆ ಸಿದ್ದು, ಫಲಪ್ರದವಾಗಿತ್ತು. ಸಂಧಾನ ಯಶಸ್ವಿ ಯಾಗಿದೆ ಎಂದು ಕೂಡ ಘೋಷಿಸಿ ದ್ದರು. ಆದರೆ 3ನೇ ವ್ಯಕ್ತಿ ಕೋಡಿಹಳ್ಳಿ ಚಂದ್ರಶೇಖರ್ ಮಾತು ಕೇಳಿ ಕೆಎಸ್ ಆರ್‍ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಉಲ್ಟಾ ಹೊಡೆದಿದ್ದಾರೆ. ಅದೇ ವೇಳೆ
ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿ ಸಂಘಟನೆಯು ನಾಳೆಯಿಂದ ಬಸ್ ಗಳನ್ನು ಓಡಿಸಲು ಒಪ್ಪಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಇಂದು ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ಪಡೆದ ಮುಖ್ಯಮಂತ್ರಿಗಳು ನಾಳೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವಂತೆಯೂ ಖಾಸಗಿ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆಯೂ ಸಲಹೆ ನೀಡಿದರು ಎಂದು ತಿಳಿದು ಬಂದಿದೆ. ಆನಂತರ ಮುಷ್ಕರ ಕೈಬಿಡುವಂತೆ ನೌಕರರಿಗೂ ಪತ್ರಿಕಾ ಪ್ರಕಟಣೆ ಮೂಲಕ ಕೋರಿದರು.