ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತಗೊಳಿಸಿದ ಸರ್ಕಾರ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್‍ನಾಥ್ ಅಸಮಾಧಾನ
ಮೈಸೂರು

ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತಗೊಳಿಸಿದ ಸರ್ಕಾರ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್‍ನಾಥ್ ಅಸಮಾಧಾನ

December 15, 2020

ಮೈಸೂರು, ಡಿ.14(ಆರ್‍ಕೆಬಿ)- ಕೋವಿಡ್-19 ನೆಪ ಹೇಳಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ನೀಡುವುದನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಚಿ ಯೋಜನೆಯಡಿ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಮಹಿಳೆಯರ ಸ್ಯಾನಿಟರ್ ಪ್ಯಾಡ್ ವಿಚಾರದಲ್ಲಿ ಸರ್ಕಾರದ ಧೋರಣೆ ಸರಿಯಲ್ಲ. ಕೋವಿಡ್ ಹಾವಳಿ ಇದೆ ಯೆಂದು ಋತುಸ್ರಾವ ನಿಲ್ಲುವುದಿಲ್ಲ. ಶೇ.12ರಷ್ಟಿರುವ ಉಳ್ಳವರಷ್ಟೇ ದುಬಾರಿ ಹಣ ನೀಡಿ ಖರೀದಿಸಬಹುದು. ಆದರೆ ಶೇ.82ರಷ್ಟಿರುವ ಬಡ ಮಹಿಳೆಯರು ಅನೈರ್ಮಲ್ಯದ ಪರಿಸ್ಥಿತಿ ಎದುರಿಸುತ್ತಾ, ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಾಗಿರುವ ಮಹಿಳೆಯರ ಬಗ್ಗೆ ಸ್ವಲ್ಪವೂ ಚಿಂತಿಸದೆ ಸ್ಥಗಿತಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಜನೌಷಧಿ ಕೇಂದ್ರಗಳಲ್ಲಿ ಒಂದು ರೂ. ನೆಪಮಾತ್ರದ ದರಗಳಿಗೆ ನಾಲ್ಕು ಸ್ಯಾನಿಟರಿ ಪ್ಯಾಡ್ ಇದ್ದ ಪ್ಯಾಕೆಟ್ ನೀಡುವುದಾಗಿ ಹೇಳಿದ್ದರೂ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಇನ್ನು, ಹಲವೆಡೆ ತಾಲೂಕು ಕೇಂದ್ರಗಳಲ್ಲಿ ಒಂದೊಂದೇ ಜನೌಷಧಿ ಕೇಂದ್ರಗಳಿದ್ದು, ಬುಡಕಟ್ಟು ಜನರು ಅಲ್ಲಿಗೆ ಬಂದು ಪಡೆಯುವುದಾದರೂ ಹೇಗೆ? ಇದೇ ರೀತಿ ಗ್ರಾಮೀಣ ಪ್ರದೇಶದ ಜನರೂ ಸಮಸ್ಯೆ ಎದುರಿಸುತ್ತಿರುವ ಕಾರಣ ಸಂಚಾರಿ ಜನೌಷಧಿ ಕೇಂದ್ರ ತೆಗೆದು ಗ್ರಾಮಾಂತರ ಮೊದಲಾದ ಪ್ರದೇಶಗಳಲ್ಲಿ ಸ್ಯಾನಿಟರಿ ಪ್ಯಾಡ್ ಮೊದಲಾದವನ್ನು ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು. ಶುಚಿ ಯೋಜನೆ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಕೇವಲ 49 ಕೋಟಿಯಷ್ಟೇ ಅಗತ್ಯವಿದ್ದು, ಇದೇನೂ ದುಬಾರಿ ಮೊತ್ತವಲ್ಲ. ಸಂಸದರ ವೇತನದಲ್ಲಿಯಾದರೂ ಕಡಿತ ಮಾಡಿ ನೀಡಬಹುದಾಗಿದೆ ಎಂದು ಸಲಹೆ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆಯವರು ಸಹ ಇದರ ಬಗ್ಗೆ ಗಮನಹರಿಸುವುದು ಸೂಕ್ತ ಎಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಲತಾ ಸಿದ್ದಶೆಟ್ಟಿ, ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ, ಡಾ. ಸುಜಾತ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Translate »