ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಇಂದು ಮೈಸೂರಲ್ಲೂ ಸಾರಿಗೆ ಸಿಬ್ಬಂದಿ ಧರಣಿ ಸತ್ಯಾಗ್ರಹ
ಮೈಸೂರು

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಇಂದು ಮೈಸೂರಲ್ಲೂ ಸಾರಿಗೆ ಸಿಬ್ಬಂದಿ ಧರಣಿ ಸತ್ಯಾಗ್ರಹ

January 24, 2023

ಮೈಸೂರು, ಜ.23(ಎಸ್‍ಬಿಡಿ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಾಳೆ(ಜ.24) ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಮೈಸೂರಿನಲ್ಲೂ ಬಸ್ ಸಂಚಾ ರಕ್ಕೆ ಅಡ್ಡಿಯಾಗದಂತೆ ಶಾಂತಿಯುತ ಧರಣಿ ನಡೆಸಲು ನಿರ್ಧರಿಸಲಾಗಿದೆ.

ನಗರದ ಬನ್ನಿಮಂಟದ ಬಾಲಭವನ ಹಿಂಭಾಗದ ಮೈಸೂರು ವಿಭಾಗೀಯ ಕಚೇರಿ ಬಳಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನೂರಾರು ನೌಕರರು ಧರಣಿ ನಡೆಸಲಿದ್ದೇವೆ. ಆದರೆ ಇದರಿಂದ ಬಸ್ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗು ವುದಿಲ್ಲ. ಪ್ರಯಾಣಿಕರಿಗೆ ಯಾವುದೇ ರೀತಿ ಯಲ್ಲಿ ತೊಂದರೆಯಾಗದಂತೆ ಶಾಂತಿಯುತ ಧರಣಿ ನಡೆಸಲಿದ್ದೇವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಡ್ಯೂಟಿ ಮುಗಿಸಿದವರು, ಮಧ್ಯಾಹ್ನ 2ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಾದವರು ಧರಣಿಯಲ್ಲಿ ಭಾಗಿಯಾಗುತ್ತಾರೆ. ರಾಜ್ಯದ 4 ಕೇಂದ್ರ ಕಚೇರಿ, 43 ವಿಭಾಗೀಯ ಕಚೇರಿಗಳ ಮುಂದೆಯೂ ಶಾಂತಿಯುತ ಧರಣಿ ಮೂಲಕ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು ಎಂದು ಕೆಎಸ್ ಆರ್‍ಟಿಸಿ ಸ್ಟಾಪ್ ಅಂಡ್ ವರ್ಕಕ್ಸ್ ಯೂನಿ ಯನ್ ಮೈಸೂರು ವಿಭಾಗದ ಅಧ್ಯಕ್ಷ ಎಸ್. ರೇವಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಮಧುಸೂದನ ಸ್ಪಷ್ಟಪಡಿಸಿದ್ದಾರೆ.

ಮೂಲ ವೇತನಕ್ಕೆ ಬಿಡಿಎ ವಿಲೀನ ಗೊಳಿಸಿ ಪರಿಷ್ಕøತ ಮೂಲ ವೇತನದ ಶೇ.25 ರಷ್ಟು ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ಧ ಪಡಿಸುವುದು, ಚಾಲಕರು, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಸೇರಿ ದಂತೆ ಎಲ್ಲಾ ನೌಕರರಿಗೂ ಬಾಟ, ಭತ್ಯೆಗಳನ್ನು 5 ಪಟ್ಟು ಹೆಚ್ಚಿಸುವುದು, ಹೊಲಿಗೆ ಭತ್ಯೆ, ಶೂ, ಜರ್ಸಿ, ರೈನ್ ಕೋಟ್ ಇತ್ಯಾದಿ ಭತ್ಯೆಯನ್ನು 3 ಪಟ್ಟು ಹೆಚ್ಚಿಸುವುದು, ಸೂಕ್ತ ಕ್ಯಾಷ್ ಅಲೋಯನ್ಸ್ ನೀಡುವುದು, ಇಎಸ್‍ಐ ಮಾದರಿಯಲ್ಲಿ ವಂತಿಗೆ ಸಂಗ್ರಹಿಸಿ ಟ್ರಸ್ಟ್ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಯೋಜನೆ ರೂಪಿಸುವುದು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿಯಲ್ಲಿ ಸಂಸ್ಥೆಯ ಆಸ್ಪತ್ರೆ ನಿರ್ಮಿಸು ವುದು, ಹೊರರೋಗಿ ಚಿಕಿತ್ಸಾ ವೆಚ್ಚಕ್ಕೆ ಮಾಸಿಕ 2 ಸಾವಿರ ರೂ. ಹಾಗೂ ಉಚಿತ ಔಷಧ ಕಲ್ಪಿಸುವುದು, ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೆ ಮರುನೇಮಕ ಮಾಡುವುದು, ಆ ವೇಳೆ ವರ್ಗಾವಣೆ ಮಾಡಿದವರನ್ನು ಮೂಲ ಘಟಕಕ್ಕೆ ವಾಪಸ್ ನಿಯೋಜಿಸುವುದು, ಫಾರ್ಮ್-4ನ್ನು ಮೋಟಾರ್ ಟ್ರಾನ್ಸ್‍ಪೋರ್ಟ್ ವರ್ಕರ್ಸ್ ಆಕ್ಟ್ ಹಾಗೂ ಸಪ್ಲಿಮೆಂಟರಿ ಒಪ್ಪಂದದ ಪ್ರಕಾರ ರಚಿಸುವುದು, ಹೆಚ್ಚುವರಿ ಓಟಿ ಭತ್ಯೆ, ಎಲ್ಲಾ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ, ರಿಯಾಯ್ತಿ ದರದಲ್ಲಿ ಕ್ಯಾಂಟಿನ್, ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ಶಿಶುಪಾಲನಾ ಕೇಂದ್ರ, 8 ಗಂಟೆ ಕರ್ತವ್ಯ ಅವಧಿ ನಿಗಧಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಲು ಸಾಂಕೇತಿಕವಾಗಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

Translate »