ಕೋವಿಡ್ ಆಸ್ಪತ್ರೆಯಾಗಿ ಟ್ರಾಮಾ ಕೇರ್ ಸೆಂಟರ್; ಇನ್ನೂ ವೈದ್ಯಕೀಯ ಸಲಕರಣೆ ಜೋಡಣೆ ಬಾಕಿ!
ಮೈಸೂರು

ಕೋವಿಡ್ ಆಸ್ಪತ್ರೆಯಾಗಿ ಟ್ರಾಮಾ ಕೇರ್ ಸೆಂಟರ್; ಇನ್ನೂ ವೈದ್ಯಕೀಯ ಸಲಕರಣೆ ಜೋಡಣೆ ಬಾಕಿ!

August 19, 2020

ಮೈಸೂರು,ಆ.18(ಆರ್‍ಕೆಬಿ)-ಕೊರೊನಾ ಸೋಂಕಿನ ಪ್ರಕರಣ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ಇರುವ ವಿಶೇಷ ಟ್ರಾಮಾ ಕೇರ್ ಸೆಂಟರ್ ಅನ್ನು `ಕೋವಿಡ್-19 ಆಸ್ಪತ್ರೆ’ಯಾಗಿ ಬಳಸಿ ಕೊಳ್ಳಲು ನಿರ್ಧರಿಸಿರುವ ಜಿಲ್ಲಾಡಳಿತ, ಶೀಘ್ರವೇ ಕಾರ್ಯಾರಂಭ ಮಾಡಲು ಅಗತ್ಯ ಸಿದ್ಧತೆ ನಡೆಸಿದೆ.

ಆಮ್ಲಜನಕ ಪೂರೈಕೆ ವ್ಯವಸ್ಥೆ, ಸೀಲಿಂಗ್ ಕೆಲಸ, ಪರದೆಗಳಿಂದ ವಾರ್ಡ್ ವಿಭಾಗಿಸುವ ಕಾರ್ಯ ಪೂರ್ಣ ಗೊಂಡಿದೆ. ಲಿಫ್ಟ್ ಅಳವಡಿಕೆ ಕೆಲಸವೂ ಭರದಿಂದ ಸಾಗಿದೆ. 200 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ಯಾಗಿಸುವ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ವೆಂಕಟೇಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಆದರೆ, ವೈದ್ಯಕೀಯ ಉಪಕರಣ ಜೋಡಣೆ ಸೇರಿ ದಂತೆ ಹಲವು ಕೆಲಸಗಳು ಇನ್ನೂ ಬಾಕಿ ಇರುವುದು `ಮೈಸೂರು ಮಿತ್ರ’ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂದಿತು. ಟ್ರಾಮಾ ಸೆಂಟರ್‍ನಲ್ಲಿ 46 ವೆಂಟಿಲೇಟರ್ ಗಳಿವೆ. ಆಕ್ಸಿಜನ್ ಪೂರೈಕೆ ಸೌಲಭ್ಯದ 200 ಹಾಸಿಗೆ ಗಳಿವೆ. ಇದರಿಂದ ಉಸಿರಾಟದ ಸಮಸ್ಯೆ, ಐಎಲ್‍ಐ ಹಾಗೂ `ಸಾರಿ’ ಸಮಸ್ಯೆ ಇರುವ ಗಂಭೀರ ಸ್ಥಿತಿಯ ಸೋಂಕಿತರನ್ನು ಟ್ರಾಮಾ ಕೇರ್ ಸೆಂಟರ್‍ನಲ್ಲಿ ದಾಖ ಲಿಸಿ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ ಎಂದು ಇತ್ತೀಚೆಗೆ ಶಾಸಕ ಎಲ್.ನಾಗೇಂದ್ರ ನೇತೃತ್ವದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದರು. ಅದರಂತೆ ಕೋವಿಡ್ ಆಸ್ಪತ್ರೆ ಯಾಗಿ ಟ್ರಾಮಾ ಕೇರ್ ಸೆಂಟರ್ ಪರಿವರ್ತಿಸಲಾಗು ತ್ತಿದೆ. ಇದು ಕಾರ್ಯಾರಂಭ ಮಾಡಿದ ಬಳಿಕ ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡುವುದನ್ನು ಸ್ಥಗಿತಗೊಳಿಸಿ, ಕೋವಿಡ್ ಸೋಂಕಿಲ್ಲದ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಸೀಮಿತಗೊಳಿಸಲಾಗು ತ್ತದೆ. ಇದರಿಂದ ಇತರೆ ರೋಗಿಗಳಿಗೆ ಕೊರೊನಾ ಆತಂಕ ನಿವಾರಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.

Translate »