ಎರಡು ಟೆಂಪೊಗಳಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ಮೈಸೂರು ಭಾಗದ 100 ರೈತರ ತಂಡ
ಮೈಸೂರು

ಎರಡು ಟೆಂಪೊಗಳಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ಮೈಸೂರು ಭಾಗದ 100 ರೈತರ ತಂಡ

January 21, 2021

ಮೈಸೂರು,ಜ.20(ಪಿಎಂ)-ಕೇಂದ್ರ ಸರ್ಕಾ ರದ ಮೂರು ಕೃಷಿ ಸಂಬಂಧಿತ ನೂತನ ಕಾಯ್ದೆಗಳ ವಿರುದ್ಧ ಗಣರಾಜ್ಯೋತ್ಸವ ದಿನ ದಂದು ರೈತರು ನಡೆಸಲು ಮುಂದಾಗಿ ರುವ ಟ್ರ್ಯಾಕ್ಟರ್ ಪರೇಡ್‍ನಲ್ಲಿ ಭಾಗವಹಿ ಸಲು ಮೈಸೂರು ಭಾಗದ ರೈತರು ನಿರ್ಧರಿ ಸಿದ್ದು, 100ಕ್ಕೂ ಹೆಚ್ಚು ರೈತರು ಬುಧವಾರ ಮೈಸೂರಿಂದ ಪ್ರಯಾಣ ಬೆಳೆಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ದೆಹಲಿ ಪ್ರಯಾಣ ಬೆಳೆಸಿರುವ ರೈತರ ತಂಡಕ್ಕೆ ಮೈಸೂರಿನ ಗನ್‍ಹೌಸ್ ಸಮೀಪದ ಕುವೆಂಪು ಉದ್ಯಾ ನವನದ ಬಳಿ ಬೀಳ್ಕೊಡಲಾಯಿತು.

ಇದಕ್ಕೂ ಮುನ್ನ ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿರುವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮೈಸೂರಿಗೆ ಆಗಮಿಸಿದ ರೈತರ ತಂಡಕ್ಕೆ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಮುಖಂಡ ಹಾಗೂ ರಾಜ್ಯ ಕಬ್ಬು ಬೆಳೆ ಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನಗೌಡ ಸೇರಿದಂತೆ ಮತ್ತಿತರ ರೈತ ಮುಖಂಡರು ಸ್ವಾಗತಿಸಿ, ಬಳಿಕ ಬೀಳ್ಕೊಟ್ಟರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕುರುಬೂರು ಶಾಂತ ಕುಮಾರ್, ಮಂಜೇಗೌಡರ ನೇತೃತ್ವದಲ್ಲಿ ರೈತರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಡೀ ದೇಶ ರೈತರು ಸರ್ಕಾರದ ವಿರುದ್ಧ ನಿಂತಿದ್ದಾರೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆದು, ಶಾಸನ ಸ್ವರೂಪದ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿಯೂ ಜ.26ರಂದು ರೈತರ ಬೃಹತ್ ರ್ಯಾಲಿ ನಡೆಯಲಿದೆ. ಅಲ್ಲದೆ, 26ರ ನಂತರ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ರೈತರು ದೆಹಲಿಗೆ ತೆರಳಿದ್ದಾರೆ. ಈ ದೇಶದ ಆಡಳಿತ ರೈತರ ಮರಣ ಶಾಸನ ಬರೆಯುತ್ತಿದೆ ಎಂದು 20 ವರ್ಷಗಳ ಹಿಂದೆಯೇ ರೈತ ನಾಯಕ ದಿ.ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹೇಳಿದ್ದರು. ಆಗ ಅವರ ಮಾತನ್ನು ಎಲ್ಲರೂ ಲಘು ವಾಗಿ ಪರಿಗಣಿಸಿದ್ದರು. ಆದರೆ ಇಂದು ಅವರು ಹೇಳಿದ್ದು ನಿಜವಾಗುತ್ತಿದೆ ಎಂದರು.

ಪುಂಡರು ಜನಪ್ರತಿನಿಧಿಗಳು ಹಾಗೂ ಮಂತ್ರಿಗಳಾದ ಪರಿಣಾಮ ರೈತರಿಗೆ ಇಂತಹ ಸಂಕಷ್ಟ ಎದುರಾಗಿದೆ. ನಿನ್ನೆಯೂ ಮೈಸೂ ರಲ್ಲಿ ಒಬ್ಬ ಸಚಿವರು ಅವಿವೇಕಿತನದಿಂದ ವರ್ತಿಸಿದ್ದಾರೆ. ಚಳುವಳಿನಿರತ ರೈತರನ್ನು ಖಲಿಸ್ತಾನಿಗಳು, ಉಗ್ರಗಾಮಿಗಳು, ಪಾಕಿಸ್ತಾನದ ಬೆಂಬಲಿಗರು ಎಂದೆಲ್ಲಾ ಪಟ್ಟಕಟ್ಟಲು ಪ್ರಯ ತ್ನಿಸಲಾಯಿತು. ಆಡಳಿತರೂಢ ಪಕ್ಷದ ಅಂಗ ಪಕ್ಷಗಳೇ ಕಾಯ್ದೆಗಳನ್ನು ವಿರೋಧಿಸುತ್ತಿ ದ್ದರೆ, ಕೆಲವು ಬಾಲಂಗೋಚಿಗಳು ರೈತರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡು ತ್ತಿದ್ದಾರೆ. ಯಾವುದೇ ಮಂತ್ರಿಗಳು ಹಾಗೂ ಸಂಸದರು ಕಾಯ್ದೆಗಳ ಸಂಬಂಧ ರೈತ ಮುಖಂಡರ ಜೊತೆಗೆ ಚರ್ಚೆಗೆ ಬರಲಿ. ನಾವು ಈ ಕಾಯ್ದೆಗಳು ರೈತ ವಿರೋಧಿ ಎಂದು ನಿರೂಪಿಸುತ್ತೇವೆ ಎಂದು ಸವಾಲು ಹಾಕಿದರು.

ಅರಳಾಪುರ ಮಂಜೇಗೌಡ ಮಾತನಾಡಿ, ದೆಹಲಿಯಲ್ಲಿ ಹರಿಯಾಣ ಮತ್ತು ಪಂಜಾಬ್ ರೈತರು ಭಾರೀ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಾವು ಬೆಂಬಲ ವಾಗಿ ನಿಲ್ಲಬೇಕಿದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 100 ಮಂದಿ ರೈತರು 2 ಟೆಂಪೊ ಹಾಗೂ 4 ಕಾರಿನಲ್ಲಿ ಹೊರಟಿ ದ್ದೇವೆ. ಜ.25ರ ರಾತ್ರಿ ದೆಹಲಿ ಸೇರಲಿದ್ದೇವೆ. ಅಲ್ಲದೆ, ರಾಜ್ಯದಿಂದ 300ಕ್ಕೂ ಹೆಚ್ಚು ರೈತರು ರೈಲಿನ ಮೂಲಕ ದೆಹಲಿಗೆ ಹೊರ ಡಲಿದ್ದಾರೆ ಎಂದರು. ಇಲ್ಲಿನ ಕುವೆಂಪು ಉದ್ಯಾನವನದಲ್ಲಿ ಭೋಜನ ಸ್ವೀಕರಿಸಿದ ನಂತರ ದೆಹಲಿ ಪ್ರಯಾಣ ಬೆಳೆಸಿರುವ ರೈತರ ತಂಡ, ಬಳಿಕ ಪುರಭವನ ಆವರಣದ ಡಾ.ಅಂಬೇಡ್ಕರ್ ಪ್ರತಿಮೆ ಹಾಗೂ ಗಾಂಧಿ ಚೌಕದ ಗಾಂಧಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿ ಪ್ರಯಾಣ ಮುಂದುವರೆಸಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ದಾನಿಗಳಿಂದ ಸಂಗ್ರಹಿಸಿರುವ 50 ಕೆಜಿ ಅಕ್ಕಿ ಸೇರಿದಂತೆ ತರಕಾರಿ, ಔಷಧ ಮತ್ತಿತರ ಸಾಮಗ್ರಿ ಗಳನ್ನು ದೆಹಲಿ ಪ್ರಯಾಣದಲ್ಲಿರುವ ರೈತರ ತಂಡಕ್ಕೆ ಇದೇ ವೇಳೆ ನೀಡಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘ ಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ರೈತ ಮುಖಂಡರಾದ ಹೊಸೂರು ಕುಮಾರ್, ಮರಂಕಯ್ಯ ಮತ್ತಿತರರು ಹಾಜರಿದ್ದರು.
ಯುವಕರಿಗೆ ಇರಿದು ಪರಾರಿಯಾಗಿದ್ದ ಆರೋಪಿ ಬಂಧನ
ಮೈಸೂರು,ಜ.20(ಆರ್‍ಕೆ)-ಕ್ಷುಲ್ಲಕ ಕಾರಣಕ್ಕೆ ಯುವಕರಿಗೆ ಡ್ರ್ಯಾಗರ್‍ನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿದ್ದವನನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕೆ.ಆರ್.ಮೊಹಲ್ಲಾದವನೆನ್ನಲಾದ ಜಯಕುಮಾರ್ ಬಂಧಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಇವನಿಗೆ ನೆರವು ನೀಡಿದ ಮತ್ತೋರ್ವನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸೋಮವಾರ ರಾತ್ರಿ ಕೈನೆಟಿಕ್ ಹೋಂಡಾದಲ್ಲಿ ಬಂದು ಮೈಸೂರಿನ ಮಹಾರಾಣಿ ಕಾಲೇಜು ಸಮೀಪ ಬೈಕ್‍ನಲ್ಲಿ ತೆರಳುತ್ತಿದ್ದ ರಂಜಿತ್ ಮತ್ತು ಅರುಣ್‍ಕುಮಾರ್ ಎಂಬುವರಿಗೆ ಇರಿದು ಪರಾರಿ ಯಾಗಿದ್ದ ಜಯಕುಮಾರ್, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಾಮನಗರ ಸಮೀಪ ಅಡಗಿ ಕುಳಿತಿದ್ದ.
ಆರಂಭದಲ್ಲಿ ಆತನ ಟವರ್ ಲೊಕೇಷನ್ ಲಭ್ಯವಾಗಲಿಲ್ಲವಾದರೂ, ಸುಳಿವಿನ ಜಾಡು ಹಿಡಿದ ಪೊಲೀಸರು, ಮಂಗಳವಾರ ರಾತ್ರಿ ವಶಕ್ಕೆ ಪಡೆದು ಠಾಣೆಗೆ ಕರೆತಂದರು. ಕೈ, ಕಾಲಿಗೆ ಗಾಯವಾಗಿರುವ ಜಯಕುಮಾರ್‍ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ತೀವ್ರ ವಿಚಾರಣೆ ಮಾಡಿದರೂ, ತನ್ನನ್ನು ಕೈನೆಟಿಕ್ ಹೋಂಡಾದಲ್ಲಿ ಡ್ರಾಪ್ ಮಾಡಿ ಹೋದವನು ಯಾರೆಂಬುದನ್ನು ಬಹಿರಂಗಪಡಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸರಿಯಾಗಿ ನೆಲೆ ಇಲ್ಲದ ಈತ, ರಂಜಿತ್ ಮತ್ತು ಅರುಣ್ ಜೊತೆ ಗೋಬಿ ಮಂಚೂರಿ ಅಂಗಡಿ ಬಳಿ ಜಗಳವಾಡಿಕೊಂಡಿದ್ದ. ಶಾಂತಲಾ ಟಾಕೀಸ್ ಬಳಿಯ ನವೀನ್ ಎಂಬಾತನ ಗೋಬಿ ಅಂಗಡಿ ಬಳಿ ನಡೆದ ಜಗಳದ ನಂತರ ದ್ವೇಷ ಸಾಧಿಸಿ, ಇಬ್ಬರನ್ನು ಮುಗಿಸಬೇಕೆಂದು ಹೊಂಚು ಹಾಕಿ, ಕಳೆದ 6 ದಿನಗಳ ಹಿಂದೆ ಡ್ರ್ಯಾಗರ್ ಖರೀದಿಸಿಟ್ಟುಕೊಂಡಿದ್ದ. ರಂಜಿತ್ ಮತ್ತು ಅರುಣ್ ಜೊತೆಯಲ್ಲಿ ಹೋಗುತ್ತಿ ದ್ದಾರೆಂಬುದನ್ನು ತಿಳಿದು ಸೋಮವಾರ ರಾತ್ರಿ ಜೆಎಲ್‍ಬಿ ರಸ್ತೆ ಜಂಕ್ಷನ್‍ನಲ್ಲಿ ಮತ್ತೋರ್ವ ನಿಂದ ಸ್ಕೂಟರ್‍ನಲ್ಲಿ ಡ್ರಾಪ್ ತೆಗೆದುಕೊಂಡು ಬಂದು ಇರಿದು ಪರಾರಿಯಾಗಿದ್ದ. ವಿಷಯ ತಿಳಿದು, ಕರ್ತವ್ಯ ನಿರತ ಸಂಚಾರ ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡು ಓಡಿ ಹೋಗಿ ನಂಜರಾಜ ಬಹದ್ದೂರ್ ಛತ್ರದೆದುರಿನ ಮೈಸೂರು ಮೆಡಿಕಲ್ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದ. ಅಲ್ಲಿಂದ ರಾಮನಗರದಲ್ಲಿ ತಲೆಮರೆಸಿಕೊಂಡಿದ್ದಾಗಿ ಬಂಧಿತ ಆರೋಪಿ ಜಯಕುಮಾರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆತನಿಗೆ ಸ್ಕೂಟರ್‍ನಲ್ಲಿ ಡ್ರಾಪ್ ಕೊಟ್ಟು ತಲೆಮರೆಸಿಕೊಂಡಿರುವ ಯುವಕನ ಪತ್ತೆಗೆ ಬಲೆ ಬೀಸಿರುವ ಲಕ್ಷ್ಮೀಪುರಂ ಠಾಣೆ ಇನ್ಸ್‍ಪೆಕ್ಟರ್ ವೆಂಕಟೇಶ್, ತನಿಖೆ ಮುಂದುವರಿಸಿದ್ದಾರೆ.

Translate »