ಮೈಸೂರು, ಸೆ.9(ಪಿಎಂ)- ಡ್ರಗ್ಸ್ ದಂಧೆ ಕೋರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ವಿವಿಧ ಭಾಗಗಳಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು.
`ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ’ ಶೀರ್ಷಿಕೆಯಡಿ ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣ ಆವರಣ, ಶಿವರಾಂ ಪೇಟೆಯ ವಿನೋಬಾ ರಸ್ತೆ ಸೇರಿದಂತೆ ವಿವಿಧೆಡೆ ಎಬಿವಿಪಿ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಸ್ಯಾಂಡಲ್‍ವುಡ್‍ನೊಂದಿಗೆ ಬೃಹತ್ ಡ್ರಗ್ಸ್ ಜಾಲದ ನಂಟಿದೆ ಎಂದು ಹೇಳಲಾಗುತ್ತಿದ್ದು, ಆತಂಕ ಸೃಷ್ಟಿ ಮಾಡಿದೆ. ಈ ಜಾಲದಲ್ಲಿ ಪ್ರಭಾವಿ ವ್ಯಕ್ತಿಗಳು, ಸಿನಿಮಾ ನಟ-ನಟಿ ಯರು ಇದ್ದಾರೆ ಎನ್ನಲಾಗುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ. ಮಾದಕ ವಸ್ತು ಗಳ ವ್ಯಸನಕ್ಕೆ ತುತ್ತಾಗುವವರು ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ, ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದ ಗ್ರಾಹಕರು ಎಂಬ ಅಂಶ ಇತ್ತೀ ಚೆಗೆ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದ್ದು, ಇದು ಆಘಾತಕಾರಿ ಎಂದು ಎಬಿವಿಪಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕ ವಿ. ಗೌತಮ್, ನಗರ ಸಂಘಟನಾ ಕಾರ್ಯ ದರ್ಶಿ ಶರತ್, ಸಹ ಕಾರ್ಯದರ್ಶಿಗಳಾದ ಪ್ರಜ್ಞಾ, ಮಲ್ಲಪ್ಪ, ಚಿರಂತ್, ನಾಗಶ್ರೀ, ಕಾರ್ಯಕರ್ತರಾದ ಸುಹಾಸ್, ಅಭಿಷೇಕ್ ಮತ್ತಿತರರು ಹಾಜರಿದ್ದರು.