ಮೈತ್ರಿ ಸರ್ಕಾರಕ್ಕೆ ಮತ್ತೆ ಗಂಡಾಂತರ: ಕಾಂಗ್ರೆಸ್ ತೊರೆಯಲು ರಮೇಶ್ ಜಾರಕಿಹೊಳಿ ನಿರ್ಧಾರ
ಮೈಸೂರು

ಮೈತ್ರಿ ಸರ್ಕಾರಕ್ಕೆ ಮತ್ತೆ ಗಂಡಾಂತರ: ಕಾಂಗ್ರೆಸ್ ತೊರೆಯಲು ರಮೇಶ್ ಜಾರಕಿಹೊಳಿ ನಿರ್ಧಾರ

April 24, 2019

ಬೆಂಗಳೂರು: ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವುದಾಗಿ ಹೇಳಿದ್ದಾರೆ. ವಿಧಾನಸಭಾ ಸದಸ್ಯತ್ವ ಹಾಗೂ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಹೇಳಿದ್ದಾರೆ.

ಕಳೆದ ಆರು ತಿಂಗಳಿಂದ ಬಂಡಾಯ ನಾಯಕರಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ಜೊತೆ ಕೈ ಜೋಡಿಸಿದ್ದರು. ಆ ಪಕ್ಷದ ನಾಯಕರ ಜೊತೆ ಗೂಡಿ ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಿದ್ದ ರಮೇಶ್, ಹತ್ತು ಹಲವು ಬಾರಿ ಆಪರೇಷನ್ ಕಮಲ ಮಾಡಿದ್ದರೂ, ಯಶಸ್ವಿ ಕಂಡಿರಲಿಲ್ಲ. ಇದೀಗ ಮೊದಲು ತಾವೇ ಕಾಂಗ್ರೆಸ್ ತೊರೆದು, ವಿಧಾನಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಗೋಕಾಕ್‍ನ ತಮ್ಮ ಸ್ವಂತ ಗ್ರಾಮದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವುದು ಖಚಿತ, ಇದುವರೆಗೂ ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷ ದಲ್ಲಿದ್ದೇನೆ ಎಂದಿದ್ದಾರೆ. ನನ್ನ ಜವಾಬ್ದಾರಿ ನನಗೆ ಗೊತ್ತಿದೆ. ನಾನು ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ಅಲ್ಲ. ಶಾಸಕ ಸ್ಥಾನದ ಜವಾಬ್ದಾರಿ ನನಗೂ ಗೊತ್ತಿದೆ ಎಂದಿದ್ದಾರೆ.ದಳ ಬಿಟ್ಟು ಕಾಂಗ್ರೆಸ್‍ಗೆ ಬಂದವರಿಂದ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ. 1999 ನಂತರ ಆಂತರಿಕ ಗೊಂದಲ ಜಾಸ್ತಿಯಾ ಗಿದ್ದು, ಇದೀಗ ತಾರಕಕ್ಕೇರಿದೆ ಎಂದಿದ್ದಾರೆ. ಲಖನ್ ಜಾರಕಿಹೊಳಿ ಶಾಸಕರಾದ್ರೆ ನನ್ನಷ್ಟು ಸಂತೋಷ ಪಡುವವರು ಯಾರೂ ಇಲ್ಲ. ಅವರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. ಲಖನ್ ಜಾರಕಿಹೊಳಿ ಗೋಕಾಕ್‍ನಲ್ಲಿ ಸ್ಪರ್ಧೆ ಮಾಡಿದ್ರೆ ನನಗೆ ಬೇರೆ ಕ್ಷೇತ್ರಗಳಿವೆ ಎಂದಿದ್ದಾರೆ. ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿಗೆ ತಲೆ ಸರಿಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡೋದು ನಿಶ್ಚಿತವೆಂದು ಹೇಳಿರುವ ರಮೇಶ್ ಜಾರಕಿಹೊಳಿಗೆ ಸಹೋದರ, ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸಿದರು.

ಯಡಿಯೂರಪ್ಪ ಕಸರತ್ತಿಗೆ ರಮೇಶ್ ಜಾರಕಿಹೊಳಿ ಬೆನ್ನೆಲುಬಾಗಿ ನಿಂತು ಕಾಂಗ್ರೆಸ್ ಮತ್ತು ಜೆಡಿಎಸ್ ವಿಧಾನಸಭಾ ಸದಸ್ಯರನ್ನು ಸೆಳೆಯುವಲ್ಲಿ ಒಂದು ಹಂತಕ್ಕೆ ಯಶಸ್ವಿ ಯಾಗಿದ್ದರು. ಆದರೆ ಸರ್ಕಾರ ಪತನಗೊಳಿಸಲು ಅಗತ್ಯವಾಗಿದ್ದ ಮ್ಯಾಜಿಕ್ ಸಂಖ್ಯೆ ಮುಟ್ಟಲು ಇಬ್ಬರಿಂದಲೂ ಸಾಧ್ಯವಾಗಲಿಲ್ಲ. ಈ ಸಂಖ್ಯೆ ಮುಟ್ಟೇ ಬಿಡುತ್ತೇವೆ ಎಂದು ಭ್ರಮೆಯಲ್ಲಿದ್ದ ನಾಯಕರಿಗೆ ಆಪರೇಷನ್ ಕಮಲಕ್ಕೆ ಜೆಡಿಎಸ್ ಶಾಸಕರನ್ನು ಸೆಳೆಯಲು ಹೊರಟಿದ್ದು, ಬಹಿರಂಗಗೊಂಡು ಯಡಿಯೂರಪ್ಪ ಸೇರಿದಂತೆ ಬಿಜೆಪಿಯೇ ಇರಿಸುಮುರುಸಿಗೆ ಒಳಗಾಗಿತ್ತು. ಇದರಿಂದ ಹೊರ ಬರುವಷ್ಟರಲ್ಲೇ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆಪರೇಷನ್ ಕಮಲದಲ್ಲಿ ಗುರುತಿಸಿಕೊಂಡಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಡಾ. ಉಮೇಶ್ ಜಾಧವ್ ಏಕಾಂಗಿಯಾಗಿ ಪಕ್ಷ ಮತ್ತು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಕಮಲದ ಚಿಹ್ನೆಯಡಿ ಕಣಕ್ಕಿಳಿದರು.

ಉಮೇಶ್ ಜಾಧವ್ ಹೊರತುಪಡಿಸಿದರೆ, ಇನ್ಯಾವುದೇ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿಲ್ಲ. ಇದಾದ ನಂತರ ರಮೇಶ್ ಜಾರಕಿಹೊಳಿ ಬಹಿರಂಗ ಹೇಳಿಕೆ ನೀಡಿದ್ದಾರೆ. ರಮೇಶ್ ಅಧಿಕೃತ ಪ್ರಕಟಣೆ ನೀಡುತ್ತಿದ್ದಂತೆ, ಅವರ ಹಿರಿಯ ಸಹೋದರ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿ ಕಿಡಿಕಾರಿದ್ದಾರೆ. ರಮೇಶ್‍ಗೆ ಕರೆದು ಸಚಿವ ಸ್ಥಾನ ನೀಡಿತ್ತು. ಸಚಿವ ಸ್ಥಾನಕ್ಕಿಂತ ಪಕ್ಷ ಮತ್ತೇನು ಕೊಡಲು ಸಾಧ್ಯ ಎಂದಿರುವ ಅವರು ಅದು ಬಿಟ್ಟು ಕಿರೀಟ ಕೊಡಲು ಪಕ್ಷಕ್ಕೆ ಆಗಲ್ಲವೆಂದು ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು. ಗೋಕಾಕ್ ತಾಲೂಕಿನ ಇತಿಹಾಸ ನೋಡಿದ್ರೆ ಯಾರು ಯಾರನ್ನು ಹಾಳು ಮಾಡಿದ್ರು ಅನ್ನೋದು ಗೊತ್ತಿದೆ. ಸಚಿವರಾಗಿದ್ದಾಗಲೇ ರಮೇಶ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಎಂದು ಆರೋಪಿಸಿದರು.

ಅಲ್ಲದೆ ಕಾಂಗ್ರೆಸ್ ಶಾಸಕ ಅಂತ ಹೇಳಿಕೊಂಡು ರಮೇಶ್ ಬಿಜೆಪಿ ಪರ ಕೆಲಸ ಮಾಡುತ್ತಾರೆ. ಅದಕ್ಕೇ ಕತ್ತಲಲ್ಲಿ ಕುಳಿತು ಕಲ್ಲು ಎಸೆಯೋದು ಅಂದಿದ್ದು. ಬಹಿ ರಂಗವಾಗಿ ಬಿಜೆಪಿ ಸೇರಿದ್ರೆ ಗೋಕಾಕ್‍ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

Translate »