ಫೆ.6, 7ರಂದು ಮೈಸೂರಲ್ಲಿ ಗೆಡ್ಡೆ-ಗೆಣಸು ಮೇಳ
ಮೈಸೂರು

ಫೆ.6, 7ರಂದು ಮೈಸೂರಲ್ಲಿ ಗೆಡ್ಡೆ-ಗೆಣಸು ಮೇಳ

February 2, 2021

ಮೈಸೂರು,ಫೆ.1(ಆರ್‍ಕೆ)-ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಫೆಬ್ರ ವರಿ 6 ಮತ್ತು 7ರಂದು ಗೆಡ್ಡೆ-ಗೆಣಸು ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಪಶ್ಚಿಮ ಸಂಸ್ಥೆ ಸಹಯೋಗ ದಲ್ಲಿ ಏರ್ಪಡಿಸಿರುವ ಮೇಳವನ್ನು ಫೆಬ್ರವರಿ 6ರಂದು ಬೆಳಗ್ಗೆ 10 ಗಂಟೆಗೆ ಯುವರಾಜ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾ ಟಿಸಲಿದ್ದು, ವಯನಾಡಿನ ಕೇದಾರಂ ಗೆಣಸು ಸಂರಕ್ಷಣೆಯ ಎನ್.ಎಂ.ಶಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಹಜ ಸಮೃದ್ಧ ಸಂಸ್ಥೆಯ ದೀಪಕ್ ತಿಳಿಸಿದ್ದಾರೆ.

ದಟ್ಟ ಅರಣ್ಯದ ಬುಡಕಟ್ಟು ಪ್ರದೇಶದಲ್ಲಿ ಬೆಳೆಯುವ ಸುಮಾರು 120 ಬಗೆಯ ಅಪರೂಪದ ಗೆಡ್ಡೆ-ಗೆಣಸುಗಳನ್ನು ಮೇಳದಲ್ಲಿ ಪ್ರದ ರ್ಶಿಸಲಾಗುವುದು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಔಷಧಿ ಯಾಗಿ ಬಳಸುವ, ಪೌಷ್ಠಿಕಾಂಶಗಳಿಂದ ಕೂಡಿದ ಹಾಗೂ ಸಮೃದ್ಧ ಗೆಡ್ಡೆ-ಗೆಣಸುಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ ಎಂದು ತಿಳಿಸಿದ್ದಾರೆ. ಆನೇಕಲ್‍ನ ಬಳ್ಳಿ ಬಟಾಣಿ, ಅಸ್ಸಾಂನ ಕಪ್ಪು ಅರಿಷಿಣ, ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ.ಕೋಟೆ ತಾಲೂಕಿನ ಜೇನು ಕುರುಬ ಮತ್ತು ಬೆಟ್ಟ ಕುರುಬ ಯುವಕರು ಬಗೆ ಬಗೆಯ ಗೆಡ್ಡೆ-ಗೆಣಸುಗಳನ್ನು ತರಲಿದ್ದಾರೆ. ಸುವರ್ಣ ಗೆಡ್ಡೆ, ಶುಂಠಿ, ಅರಿಷಿಣದ ತಳಿಗಳು, 80 ಕೆಜಿ ತೂಗುವ ಉತ್ತರಿ ಗೆಣಸು, ಬಳ್ಳಿ ಗೆಣಸುಗಳು ಮೇಳದಲ್ಲಿ ಕಂಗೊಳಿಸಲಿವೆ. ಪುತ್ತೂರಿನ ಗೆಣಸಿನ ಐಸ್‍ಕ್ರೀಂ, ಬಿಳಿಗಿರಿರಂಗನಬೆಟ್ಟದ ಸುಟ್ಟ ಕಾಡು ಗೆಣಸು, ಹಾಲುಬಾಯಿ, ಟ್ಯಾನಿಯಾ ಗೆಡ್ಡೆ ಚಿಪ್ಸ್, ಪರ್ಪಲ್ ಹೋಂ ಪಲ್ಯ, ಬಿಳಿ ಗೆಣಸು, ದೊಡ್ಡ ಕಸು, ಬಳ್ಳಿ ಆಲೂಗೆಡ್ಡೆ, ಮುಳ್ಳು ಗೆಣಸು, ಹೆಡಿಗೆ ಗೆಣಸು, ಉತ್ತರಿ ಗೆಡ್ಡೆ, ಕಪ್ಪು ಮತ್ತು ಹಸಿರು ಅರಿಷಿಣ, ಕೋವೆ ಬೀಜದ ಗೆಡ್ಡೆಗಳು, ಕಪ್ಪು ಕ್ಯಾರೆಟ್ ಬೀಜ ಮೇಳದಲ್ಲಿ ಮಾರಾಟವಾಗಲಿವೆ. ಪ್ರತೀದಿನ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿರುವ ಮೇಳಕ್ಕೆ ಉಚಿತ ಪ್ರವೇಶವಿದ್ದು, ಮಾಹಿತಿಗೆ ದೀಪಕ್ ಅವರನ್ನು 9986623073 ಮೊಬೈಲ್ ಮೂಲಕ ಸಂಪರ್ಕಿಸಬಹುದಾಗಿದೆ.

 

 

Translate »