ಅಕ್ರಮವಾಗಿ ಗೂಬೆ ಸಾಗಿಸುತ್ತಿದ್ದ ಇಬ್ಬರ ಸೆರೆ
ಮೈಸೂರು

ಅಕ್ರಮವಾಗಿ ಗೂಬೆ ಸಾಗಿಸುತ್ತಿದ್ದ ಇಬ್ಬರ ಸೆರೆ

October 23, 2018

ಮೈಸೂರು: ಮೈಸೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ಅವರು ಸಾಗಿಸುತ್ತಿದ್ದ ಗೂಬೆ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಶಿಕಾರಿಪುರದ ಎನ್.ಆರ್. ಶ್ರೀಧರ್(24) ಮತ್ತು ಕೊಡಗಿನ ವಿರಾಜಪೇಟೆ ತಾಲೂಕು ಬಿಳುಗುಂದ ಗ್ರಾಮದ ಬಿ.ಎ.ರವೀಶ್ ರಾವ್(46) ಬಂಧಿತ ರಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿವರ: ಮೈಸೂರಿನ ಅರಣ್ಯ ಸಂಚಾರ ದಳಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಕಂಟ್ರಿ ಕ್ಲಬ್ ಬಳಿ ಅ.21ರಂದು ಕಾದಿದ್ದರು. ಈ ವೇಳೆ ಶ್ರೀರಂಗಪಟ್ಟಣ ಕಡೆಯಿಂದ ಬಂದ ನ್ಯಾನೋ ಕಾರನ್ನು (ಕೆಎ.12-ಝಡ್.2680) ತಡೆದು ಪರಿಶೀಲಿ ಸಲಾಗಿ ಕಾರಿನ ಹಿಂಬದಿ ಸೀಟಿನ ಬಳಿ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಜೀವಂತ ಗೂಬೆ ಇರುವುದು ಪತ್ತೆಯಾಗಿದೆ. ಈ ಗೂಬೆ ಸಾಗಿಸಲು ಇವರ ಬಳಿ ಯಾವುದೇ ಪರವಾನಗಿ ಇರಲಿಲ್ಲ. ಈ ವ್ಯಕ್ತಿಗಳು ಗೂಬೆಯನ್ನು ಮಾರಾಟ ಮಾಡಲು ಹುಣಸೂರಿಗೆ ಸಾಗಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಗೂಬೆ ಮತ್ತು ಕಾರನ್ನು ವಶಪಡಿಸಿ ಕೊಂಡ ಅರಣ್ಯಾಧಿಕಾರಿಗಳು ಆರೋಪಿಗಳಿಬ್ಬರನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 2(16), 9, 39, 44, 48ಎ, 49, 51, ಶೆಡ್ಯೂಲ್ 4ರ ಕ್ರಮ ಸಂಖ್ಯೆ 48ರಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಮೈಸೂರಿನ 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »