ಮೈಸೂರಿನ ಮತ್ತೆರಡು ಪ್ರದೇಶ ಕಂಟೇನ್ಮೆಂಟ್ ಮುಕ್ತ
ಮೈಸೂರು

ಮೈಸೂರಿನ ಮತ್ತೆರಡು ಪ್ರದೇಶ ಕಂಟೇನ್ಮೆಂಟ್ ಮುಕ್ತ

May 4, 2020

ಮೈಸೂರು, ಮೇ 3(ಪಿಎಂ)- ಕೊರೊನಾ ಸೋಂಕು ಪತ್ತೆ ಯಾಗಿ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದ ಮತ್ತೆರಡು ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್‍ನಿಂದ ಮುಕ್ತ ಗೊಳಿಸಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಆದೇಶ ಹೊರಡಿಸಿ ದ್ದಾರೆ. ನಗರದ ಲಷ್ಕರ್ ಮೊಹಲ್ಲಾ ಹಾಗೂ ಗೋಕುಲಂ ಪ್ರದೇಶವನ್ನು ಕಂಟೇನ್ಮೆಂಟ್ ಹಾಗೂ ಬಫರ್ ವಲಯದಿಂದ ಕೈಬಿಟ್ಟು ಜಿಲ್ಲಾಧಿಕಾರಿಗಳು ಭಾನುವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ಲಷ್ಕರ್ ಮೊಹಲ್ಲಾ ಹಾಗೂ ಗೋಕುಲಂನಲ್ಲಿ ಸೋಂಕಿತರ ವಾಸಸ್ಥಳ ಸುತ್ತಳತೆಯ 100 ಮೀ. ವ್ಯಾಪ್ತಿ ಪ್ರದೇಶವನ್ನು ಕಂಟೇನ್ಮೆಂಟ್ ವಲಯವನ್ನಾಗಿ ಹಾಗೂ ಕಂಟೇನ್ಮೆಂಟ್ ಅವಧಿ ಪೂರ್ಣಗೊಂಡ ಬಳಿಕ 5 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಬಫರ್ ವಲಯವಾಗಿ ಗುರುತಿಸಲಾಗಿತ್ತು. ಅದರಂತೆ ಪಿ-27 (ಮೈಸೂರಿನ 2ನೇ ಪ್ರಕರಣ) ಹಾಗೂ ಪಿ-160 ಸೋಂಕಿತರು ಪತ್ತೆಯಾದ ಲಷ್ಕರ್ ಮೊಹಲ್ಲಾದ ಮೀನಾ ಬಜಾರ್‍ನ ಸಾಡೇ ರಸ್ತೆ ಹಾಗೂ ಕಾಂತರಾಜ ಉದ್ಯಾನವನ ರಸ್ತೆಗಳನ್ನು ಕಂಟೇನ್ಮೆಂಟ್ ವಲಯಗಳಾಗಿಸಿ ನಿರ್ಬಂಧಿಸಿ, ಸುತ್ತಲ ಪ್ರದೇಶವನ್ನು ಬಫರ್ ವಲಯವಾಗಿ ಘೋಷಿಸಲಾಗಿತ್ತು. ಪಿ-158 ಸೋಂಕಿತ ಪತ್ತೆಯಾದ ಗೋಕುಲಂನ 5ನೇ ಮುಖ್ಯ ರಸ್ತೆಯ 14ನೇ ಅಡ್ಡ ರಸ್ತೆಯನ್ನು ಕಂಟೇನ್ಮೆಂಟ್ ವಲಯವಾಗಿ ನಿರ್ಬಂಧಿಸಿ, ಸುತ್ತಲು ಪ್ರದೇಶವನ್ನು ಬಫರ್ ವಲಯ ಎಂದು ಘೋಷಿಸಲಾಗಿತ್ತು. ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ನಂತರದ 28 ದಿನಗಳಲ್ಲಿ ಸೋಂಕಿನ ಹೊಸ ಪ್ರಕರಣ ಪತ್ತೆ ಯಾಗದ್ದರಿಂದ ಈ ಎರಡೂ ಸ್ಥಳಗಳನ್ನು ಕಂಟೇನ್ಮೆಂಟ್ ಹಾಗೂ ಬಫರ್ ವಲಯ ವ್ಯಾಪ್ತಿಯಿಂದ ಕೈಬಿಡಲಾಗಿದೆ.

Translate »