ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ಮೈಸೂರಿನ ಇಬ್ಬರು ಸಮುದ್ರ ಪಾಲು
ಮೈಸೂರು

ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ಮೈಸೂರಿನ ಇಬ್ಬರು ಸಮುದ್ರ ಪಾಲು

May 31, 2022

ಮೈಸೂರು, ಮೇ 30(ಆರ್‍ಕೆ)-ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ಮೈಸೂ ರಿನ ಇಬ್ಬರು ಜಲಸಮಾಧಿಯಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ.

ಮೈಸೂರಿನ ಜಯನಗರ 4ನೇ ಕ್ರಾಸ್ ನಿವಾಸಿ ಮಹದೇವಾರಾಧ್ಯ ಅವರ ಮಗ ದಿವಾಕರ ಆರಾಧ್ಯ(40) ಹಾಗೂ ಚೌಡೇಗೌಡ ಅವರ ಮಗ ನಿಂಗಪ್ಪ(62) ಸಮುದ್ರ ಪಾಲಾದವರು. ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಡಾ. ಅಂಬೇಡ್ಕರ್ ನಗರ ನಿವಾಸಿ ಕೃಷ್ಣಾ ನಾಯಕ ಅವರ ಮಗ ಅವಿನಾಶ(32) ಹಾಗೂ ವಾಸು (30) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನ ಅಗ್ರಹಾರ ಸರ್ಕಲ್‍ನಲ್ಲಿರುವ ಮಹಾದೇವಾ ರಾಧ್ಯ ಅವರ ಸಂಸ್ಥೆ ಆರಾಧ್ಯ ಫುಡ್ ಅಂಡ್ ಬೆವರೇ ಜಸ್‍ನಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ್, ನಿಂಗಪ್ಪ ಹಾಗೂ ವಾಸು ಅವರನ್ನು ಕರೆದುಕೊಂಡು ಹೋಗಿ, ದಿವಾಕರ ಆರಾಧ್ಯ ಮಂಗಳೂರಿನಲ್ಲಿ ನಡೆಯುತ್ತಿದ್ದ ಹಲಸಿನ ಮೇಳದಲ್ಲಿ ಸಿರಿಧಾನ್ಯ ಸಾವಯವ ಕೃಷಿ ಉತ್ಪನ್ನದ ಜ್ಯೂಸ್ ಮಾರಾಟ ಮಳಿಗೆ ತೆರೆದಿದ್ದರು. ಭಾನುವಾರ ಸಂಜೆಯವರೆಗೂ ಮೇಳದಲ್ಲಿ ಒಳ್ಳೆಯ ವ್ಯಾಪಾರ ಮಾಡಿ, ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು.

ಇಂದು ಬೆಳಗ್ಗೆ ಎದ್ದು 6.30ರ ಸಮಯದಲ್ಲಿ ಸಮೀಪದ ಪಣಂಬೂರು ಬೀಚ್‍ಗೆ ವಿಹಾರಕ್ಕೆ ತೆರಳಿದ್ದ ಈ ನಾಲ್ವರೂ ಸಮುದ್ರಕ್ಕಿಳಿದಿದ್ದಾರೆ. ಆ ವೇಳೆ ನೀರಲ್ಲಿ ಸಾಕಷ್ಟು ದೂರ ತೆರಳಿದ್ದ ದಿವಾಕರ ಆರಾಧ್ಯ ಹಾಗೂ ನಿಂಗಪ್ಪ ಅವರು ರಭಸವಾಗಿ ಬಂದ ಭಾರೀ ಅಲೆಗೆ ಸಿಲುಕಿ ಕಣ್ಮರೆಯಾದರು ಎಂದು ಬದುಕುಳಿದ ಅವಿನಾಶ್ ಮತ್ತು ವಾಸು ಪೊಲೀ ಸರಿಗೆ ತಿಳಿಸಿದ್ದಾರೆ. ಆ ವೇಳೆ ಇನ್ನಿತರ ಪ್ರವಾಸಿಗರೂ ಅಲ್ಲಿ ದ್ದರಾದರೂ, ಯಾರೂ ದಿವಾಕರ ಮತ್ತು ನಿಂಗಪ್ಪರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮುಂಜಾನೆ, ಜೊತೆಗೆ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರೀ ಅಲೆ ಇಬ್ಬರನ್ನೂ ಕ್ಷಣಾರ್ಧದಲ್ಲಿ ಹೊತ್ತೊಯ್ಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಣಂ ಬೂರು ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಬೆಳಗ್ಗೆ 11.30ರ ವೇಳೆಗೆ ದಿವಾಕರ ಆರಾಧ್ಯ ಮತ್ತು ನಿಂಗಪ್ಪ ಅವರ ಮೃತದೇಹಗಳನ್ನು ಪತ್ತೆ ಮಾಡಿ, ಹೊರ ತೆಗೆದರು. ಸಿಆರ್‍ಪಿಸಿ ಕಲಂ 174 ರೀತ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಜರು ನಡೆಸಿದ ನಂತರ ಮಂಗಳೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಜೆ ದೇಹಗಳನ್ನು ವಾರಸುದಾರರಿಗೆ ಒಪ್ಪಿಸಿದರು.

ವಿಹಾರಕ್ಕೆಂದು ಪಣಂಬೂರು ಬೀಚಿಗೆ ಬಂದಿದ್ದ ನಾವು ತೀರದಲ್ಲೇ ನಿಂತಿದ್ದೆವು. ದಿವಾಕರ ಮತ್ತು ನಿಂಗಪ್ಪ ನಿರಿನಲ್ಲಿ ಬಹಳ ದೂರ ಹೋದರು. ಮುಂದೆ ಹೋಗಬೇಡಿ ಎಂದು ನಾವು ಕೂಗಿಕೊಂಡೆವು, ಆದರೂ ಅಷ್ಟರಲ್ಲಿ ಭಾರೀ ಅಲೆಯು ಅವರನ್ನು ಸೆಳೆಯಿತು ಎಂದು ಪ್ರಾಣಾಪಾಯದಿಂದ ಪಾರಾ ಗಿರುವ ಅವಿನಾಶ ಮತ್ತು ವಾಸು ಹೇಳಿಕೆ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮೈಸೂರಿನಿಂದ ಮಂಗ ಳೂರಿಗೆ ತೆರಳಿದ ಮೃತರ ಸಂಬಂಧಿಕರು, ಮರಣೋತ್ತರ ಪರೀಕ್ಷೆ ನÀಂತರ ದೇಹಗಳೊಂದಿಗೆ ರಾತ್ರಿ ಮೈಸೂರಿಗೆ ವಾಪಸ್ಸಾಗಿದ್ದಾರೆ. ಸಮುದ್ರದ ಅಲೆ ಸೆಳೆತಕ್ಕೆ ಸಿಲುಕಿ ಕಣ್ಣೆದುರಲ್ಲೇ ದಿವಾಕರ ಮತ್ತು ನಿಂಗಪ್ಪ ನೀರಿನಲ್ಲಿ ಕಣ್ಮರೆ ಯಾಗಿದ್ದರಿಂದ ಅವಿನಾಶ್ ಮತ್ತು ವಾಸು ಆಘಾತದಿಂದ ಅಸ್ವಸ್ಥರಾಗಿದ್ದರು. ತಕ್ಷಣ ಅವರಿಗೆ ಮಂಗಳೂ ರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು ಎಂದು ಪಣಂಬೂರು ಠಾಣೆ ಪೊಲೀಸರು ತಿಳಿಸಿದ್ದಾರೆ.ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರದಲ್ಲಿ ಆಹಾರ ಮೇಳ, ಮಾವು ಮೇಳ ನಡೆದರೂ ಅಲ್ಲಿ ದಿವಾಕರ ಆರಾಧ್ಯ ಅವರು ಜ್ಯೂಸ್ ಮಾರಾಟ ಮಳಿಗೆ ತೆರೆಯುತ್ತಿದ್ದರು. ಅದರಂತೆ ಮಂಗಳೂರು ಹಲಸು ಮೇಳ ದಲ್ಲೂ ಮಳಿಗೆ ಗಿಟ್ಟಿಸಿ, ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮಂಗಳವಾರ ಈ ಇಬ್ಬರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಬಂಧುಗಳು ತಿಳಿಸಿದ್ದಾರೆ.

Translate »