ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ
ಮೈಸೂರು

ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ

December 4, 2018

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಹಾಗೂ ರೈಲ್ವೆ ಉದ್ಯೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಂಚೇಗೌಡನಕೊಪ್ಪಲು ಹಾಗೂ ಮಂಜುನಾಥಪುರದಲ್ಲಿ ಭಾನುವಾರ ಸಂಭವಿಸಿದೆ.
ಮಂಚೇಗೌಡನಕೊಪ್ಪಲು ನಿವಾಸಿ ನಿಶಾಂತ್ ಅವರ ಪತ್ನಿ ಶ್ರೀಮತಿ ಮಹಾಲಕ್ಷ್ಮಿ(32) ನೇಣಿಗೆ ಶರಣಾದವರು. 13 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಾಲಕ್ಷ್ಮಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಹಳೇ ಮನೆ ನೆಲಸಮಗೊಳಿಸಿ ಹೊಸ ಮನೆ ಕಟ್ಟಿಸಿದ್ದ ದಂಪತಿ, ತಿಂಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದರು ಎಂದು ತಿಳಿದು ಬಂದಿದೆ.

ಕಳೆದ ಮಧ್ಯರಾತ್ರಿ ಹೊಸ ಮನೆಯ ಕೊಠಡಿ ಯೊಂದರಲ್ಲಿ ನೇಣು ಬಿಗಿದುಕೊಂಡಿದ್ದ ಮಹಾಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆ ಅಸುನೀಗಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಹೆಬ್ಬಾಳು ಠಾಣೆ ಇನ್‍ಸ್ಪೆಕ್ಟರ್ ಗುರು ಪ್ರಸಾದ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವರಾತ್ರೀ ಶ್ವರ ನಗರದಲ್ಲಿರುವ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು, ವಾರಸುದಾರರಿಗೆ ದೇಹವನ್ನು ಒಪ್ಪಿಸಿದರು. ಮೈಸೂರಿನ ಪಡುವಾರಹಳ್ಳಿಯವರಾದ ಮಹಾಲಕ್ಷ್ಮಿ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ರೈಲ್ವೆ ಉದ್ಯೋಗಿ: ಜೀವನದಲ್ಲಿ ಜಿಗುಪ್ಸೆಗೊಂಡ ರೈಲ್ವೆ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಂಜುನಾಥಪುರದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಮಂಜುನಾಥಪುರ ನಿವಾಸಿ ಲೇಟ್ ಕಾವೇರಪ್ಪ ಅವರ ಮಗ ಕಾರ್ತಿಕ್(24) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಯುವಕ. ರೈಲ್ವೆ ಇಲಾಖೆಯಲ್ಲಿ ನೌಕರನಾಗಿದ್ದ ಕಾವೇರಪ್ಪ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಪುತ್ರ ಕಾರ್ತಿಕ್‍ಗೆ ಕೆಲಸ ಸಿಕ್ಕಿತ್ತು. ಭಾನುವಾರ ಮಧ್ಯಾಹ್ನ ಆತ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿವಿ ಪುರಂ ಠಾಣೆ ಇನ್‍ಸ್ಪೆಕ್ಟರ್ ಸೂರಜ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »