ಮೈಸೂರು, ಅ.28(ಎಂಟಿವೈ)-ಇತ್ತೀಚೆಗೆ ಮೈಸೂರಲ್ಲಿ ನಡೆದ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯೂ ಆಗಿದ್ದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಹತ್ಯೆ ಪ್ರಕರಣವನ್ನು ಮೈಸೂರು ನಗರ ಪೊಲೀಸರು ಭೇದಿಸಿದ್ದು, ಮೂವರು ಶಿಕ್ಷಕರೇ ಸುಪಾರಿ ನೀಡಿ ಆತನನ್ನು ಕೊಲೆ ಮಾಡಿಸಿರುವುದು ಬಯಲಾಗಿದೆ. ಖ್ಯಾತ ಹಿನ್ನಲೆ ಗಾಯಕಿ ಅನನ್ಯ ಭಟ್ ಅವರ ತಂದೆ, ಮೈಸೂರಿನ ವಿಶ್ವಚೇತನ ಸಂಸ್ಕøತ ಪಾಠಶಾಲೆಯ ಮುಖ್ಯಶಿಕ್ಷಕ ಕೆ.ವಿಶ್ವನಾಥ್ ಭಟ್(52) ಹತ್ಯೆಗೆ ಸುಪಾರಿ ನೀಡಿದ್ದವರಾಗಿದ್ದು, ಅವರಿಗೆ ಅದೇ ಶಾಲೆಯ ಸಹಶಿಕ್ಷಕ ಪರಶಿವ(55) ಸಹಕಾರ ನೀಡಿದ್ದಾರೆ. ಮೈಸೂರಿನ ಮಡಿವಾಳ ಸ್ವಾಮಿ ಸಂಸ್ಕøತ ಪಾಠಶಾಲೆಯ ಮುಖ್ಯಶಿಕ್ಷಕ ಸಿದ್ದರಾಜು(54) ಸುಪಾರಿ ಹಂತಕರನ್ನು ನಿಯೋಜನೆ ಮಾಡಿದ್ದಾರೆ. ಸುಪಾರಿ ಪಡೆದ ಖಾಸಗಿ ಬ್ಯಾಂಕ್ ವೊಂದರ ರಿಕವರಿ ಏಜೆಂಟ್ ಎಂ.ನಾಗೇಶ್(37) ಮತ್ತು ಕಟ್ಟಡ ಕಾರ್ಮಿಕ ಎನ್.ನಿರಂಜನ್(22) ಅವರುಗಳು ಪರಶಿವಮೂರ್ತಿಯವರನ್ನು ಸೆಪ್ಟೆಂಬರ್ 20ರಂದು ರಾತ್ರಿ 8.15ರ ಸಮಯದಲ್ಲಿ ನಿವೇದಿತ ನಗರದಲ್ಲಿರುವ ಅವರ ಮನೆಯಲ್ಲೇ ಹತ್ಯೆ ಮಾಡಿದ್ದರು. ಈ ಪ್ರಕರಣದ
ಬಗ್ಗೆ ಬುಧವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ, ಈ ಎಲ್ಲಾ ಆರೋಪಿಗಳನ್ನು ಬಂಧಿಸಿ, ಹತ್ಯೆಗೆ ಬಳಸಿದ್ದ 4 ದ್ವಿಚಕ್ರ ವಾಹನ, ಒಂದು ಟಾಟಾ ಏಸ್ ಗೂಡ್ಸ್ ವಾಹನ, 2 ಚಾಕು, 8 ಮೊಬೈಲ್ ಫೋನ್ ಮತ್ತು 55 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.
ಕಿರುಕುಳ: ವಿಶ್ವಚೇತನ ಸಂಸ್ಕøತ ಪಾಠಶಾಲೆಯ ಕಾರ್ಯದರ್ಶಿ ಯಾಗಿದ್ದ ಪರಶಿವ ಮೂರ್ತಿ ಕಿರುಕುಳ ನೀಡಿದ್ದೇ ಅವರ ಹತ್ಯೆಗೆ ಸುಪಾರಿ ನೀಡಲು ಕಾರಣ ಎಂದು ಈ ಪಾಠಶಾಲೆಯ ಮುಖ್ಯಶಿಕ್ಷಕ ಕೆ.ವಿಶ್ವನಾಥ್ ಭಟ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಪಾಠಶಾಲೆಯು ಅನುದಾನಿತ ಶಾಲೆಯಾಗಿದ್ದು, ಶಿಕ್ಷಕರಿಗೆ ಸರ್ಕಾರದಿಂದಲೇ ಸಂಬಳ ಬರುತ್ತಿತ್ತು. ಆದರೆ, ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿಯವರು ಶಿಕ್ಷಕರ ವೇತನ ದಲ್ಲೂ ತಮಗೆ ಹಣ ನೀಡಬೇಕೆಂದು ಪೀಡಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ವಿಶ್ವನಾಥ್ ಭಟ್ ಜೊತೆ ಆಗಿಂದಾಗ್ಗೆ ಜಗಳ ಮಾಡುತ್ತ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಪರಶಿವಮೂರ್ತಿ ಜೀವಂತ ಇರುವವರೆವಿಗೂ ತನಗೆ ಉಳಿಗಾಲ ಇಲ್ಲ ಎಂದು ವಿಶ್ವನಾಥ್ ಭಟ್ ಅವರು ಮಡಿವಾಳಸ್ವಾಮಿ ಸಂಸ್ಕøತ ಪಾಠಶಾಲೆಯ ಮುಖ್ಯಶಿಕ್ಷಕ ಸಿದ್ದರಾಜು ಬಳಿ ಪ್ರಸ್ತಾಪಿಸಿದಾಗ, ಹತ್ಯೆಯ ಸಂಚು ರೂಪುಗೊಂಡಿತು. ಸಿದ್ದರಾಜು ಅವರು ತಮಗೆ ಪರಿಚಯ ವಿದ್ದ ಭುಗತಗಳ್ಳಿ ಗ್ರಾಮದ ಎಂ.ನಾಗೇಶ್ ಮತ್ತು ಎನ್.ನಿರಂಜನ್ ಅವರನ್ನು ಸಂಪರ್ಕಿಸಿ, ಪರಶಿವಮೂರ್ತಿಯವರನ್ನು ಹತ್ಯೆ ಮಾಡಲು ಮನವೊಲಿಸಿದ್ದಾರೆ. ಹತ್ಯೆಗೆ 7 ಲಕ್ಷ ರೂ. ನಗದು ಮತ್ತು ವಿಶ್ವಚೇತನ ಸಂಸ್ಕøತ ಪಾಠಶಾಲೆಯಲ್ಲಿ ಖಾಯಂ ಉದ್ಯೋಗ ಕಲ್ಪಿಸುವ ಭರವಸೆ ನೀಡಲಾಗಿತ್ತು ಎಂದು ಪ್ರಕಾಶ್‍ಗೌಡ ತಿಳಿಸಿದರು.
ಪರಶಿವಮೂರ್ತಿಯವರಿಗೂ ನಿಮಗೂ (ಸುಪಾರಿ ಹಂತಕರು) ಯಾವುದೇ ರೀತಿಯ ಸಂಪರ್ಕವಿಲ್ಲದ ಕಾರಣ ನೀವು ಸಿಕ್ಕಿ ಬೀಳುವ ಸಾಧ್ಯತೆಯೇ ಇಲ್ಲ ಎಂದು ಸುಪಾರಿ ಹಂತಕರಿಗೆ ವಿಶ್ವನಾಥ್ ಭಟ್ ಮತ್ತು ಸಿದ್ದರಾಜು ಧೈರ್ಯ ತುಂಬಿದ್ದರಂತೆ. ಕಳೆದ ಸೆಪ್ಟೆಂಬರ್ 20ರಂದು ರಾತ್ರಿ ಪರಶಿವಮೂರ್ತಿಯವರ ಮನೆಗೆ ನುಗ್ಗಿದ ನಾಗೇಶ್ ಮತ್ತು ನಿರಂಜನ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಹತ್ಯೆಗೂ ಮುನ್ನ ಇವರಿಗೆ 1 ಲಕ್ಷ ರೂ. ಮುಂಗಡ ಹಣ ನೀಡಲಾಗಿತ್ತು. ಹತ್ಯೆಯ ನಂತರ 3 ಲಕ್ಷ ರೂ. ನೀಡಿ, ಉಳಿದ ಹಣವನ್ನು ಶೀಘ್ರವೇ ನೀಡುವುದಲ್ಲದೇ ಸಂಸ್ಕøತ ಪಾಠಶಾಲೆಯಲ್ಲಿ ಉದ್ಯೋಗ ಕಲ್ಪಿಸುವುದಾಗಿಯೂ ಭರವಸೆ ನೀಡಲಾಗಿತ್ತು ಎಂದು ಡಿಸಿಪಿ ತಿಳಿಸಿದರು.
ಸಿಸಿ ಕ್ಯಾಮರಾ ಫುಟೇಜ್ ಹೊರತುಪಡಿಸಿ ಬೇರೆ ಯಾವುದೇ ಸುಳಿವು ಇಲ್ಲದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‍ಗೌಡ, ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಕೆ.ಆರ್. ಉಪ ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ನೇತೃತ್ವದಲ್ಲಿ ಸರಸ್ವತಿಪುರಂ ಠಾಣೆ ಇನ್ಸ್‍ಪೆಕ್ಟರ್ ಆರ್.ವಿಜಯಕುಮಾರ್, ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ಜಿ.ಸಿ.ರಾಜು, ಸರಸ್ವತಿಪುರಂ ಠಾಣೆ ಸಬ್‍ಇನ್ಸ್‍ಪೆಕ್ಟರ್ ಭವ್ಯ, ಎಎಸ್‍ಐ ಕರುಣಾಕರ್, ಸಿಬ್ಬಂದಿ ಬಸವರಾಜೇ ಅರಸ್, ರಾಘವೇಂದ್ರ, ಪ್ರಕಾಶ್, ಕುಮಾರ್, ಅರ್ಜುನ್, ನಟರಾಜ್, ವೆಂಕಟೇಶ್, ಹರೀಶ್‍ಕುಮಾರ್, ಕೆ.ಆರ್.ಉಪವಿಭಾಗದ ಕ್ರೈಂ ಬ್ರಾಂಚ್ ಸಿಬ್ಬಂದಿಗಳಾದ ಮಹದೇವ, ಪಿ.ಕೆ.ಭಗತ್, ಯೋಗೇಶ್, ಹರೀಶ್, ಮೇಘನಾಯಕ್, ಗಿರೀಶ್, ಸಾಗರ್, ಮಂಜುನಾಥ್, ಪುಟ್ಟಪ್ಪ, ವಿವಿಪುರಂ ಸಂಚಾರ ಠಾಣೆಯ ಹೆಚ್.ಯೋಗೇಶ್, ತಾಂತ್ರಿಕ ಘಟಕದ ಸಿಬ್ಬಂದಿ ಗಳಾದ ಮಂಜು, ಕುಮಾರ್ ಅವರನ್ನೊಳಗೊಂಡ ವಿಶೇಷ ಪಡೆ ರಚಿಸಿದ್ದರು. ಈ ಪಡೆಯು ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.