ಮೈಸೂರು, ಸೆ. 10(ಆರ್‍ಕೆ)- ಮೈಸೂರಿನಲ್ಲಿ ಮನೆ ಮುಂದೆ, ರಸ್ತೆಬದಿಗಳಲ್ಲಿ ನಿಂತಿರುವ ಡಿಸ್ಕ್ ಸಮೇತ ವಾಹನಗಳ ಟೈರ್ ಕಳವು ಮಾಡುವ ಖದೀಮರಿದ್ದಾರೆ ಎಚ್ಚರ… ಎಚ್ಚರ… ವಾಹನ ಮಾಲೀಕರೇ.
ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿರುವ ಹೆಬ್ಬಾಳು ಪೊಲೀಸ್ ಠಾಣೆ ಸಮೀಪವೇ ಕಳೆದ ರಾತ್ರಿ ನಿಂತಿದ್ದ 2 ಸರಕು ಸಾಗಣೆ ವಾಹನಗಳ ಮೂರು ಚಕ್ರಗಳನ್ನು ಕಳಚಿ ಕೊಂಡು ಹೋಗಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಹೆಬ್ಬಾಳಿನ ರಿಂಗ್ ರಸ್ತೆ ಸಮೀಪದ ಮನೆ ಮುಂದೆ ನಿಲ್ಲಿಸಿದ್ದ ಸುನಿಲ್ ಮತ್ತು ನಂದೀಶ್ ಎಂಬುವರಿಗೆ ಸೇರಿದ ಎರಡು ಗೂಡ್ಸ್ ವಾಹನಗಳಿಂದ ಮೂರು ಟೈಯರ್ ಗಳನ್ನು ಡಿಸ್ಕ್ ಸಮೇತ ಖದೀಮರು ಕದ್ದೊಯ್ದಿದ್ದಾರೆ.
ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಾಡಿಗೆಗೆ ಹೋಗಿದ್ದು, ರಾತ್ರಿ ಬಂದು ಮನೆ ಮುಂದೆ ನಿಲ್ಲಿಸಿದ್ದ ಈ ವಾಹನಗಳ ಚಕ್ರಗಳು ನಾಪತ್ತೆಯಾಗಿರುವುದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿತು. ವಾಹನಗಳ ಚಾರ್ಸಿಯಡಿ ಸೈಜುಗಲ್ಲುಗಳನ್ನಿಟ್ಟು ಸರಾಗವಾಗಿ ಚಕ್ರ ಕಳಚಿ ಹೊತ್ತೊಯ್ಯ ಲಾಗಿದ್ದು, ವೃತ್ತಿನಿರತ ಖದೀಮರ ಗ್ಯಾಂಗ್ ಕೃತ್ಯಕ್ಕಿಳಿದಿರ ಬಹುದೆಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಹೆಬ್ಬಾಳು ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಲಿನ ಪ್ರದೇಶ ದಲ್ಲಿರುವ ಸಿಸಿ ಕ್ಯಾಮರಾಗಳಿಂದ ಫುಟೇಜಸ್ ಕಲೆ ಹಾಕಿ, ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ. ಒಂದು ಚಕ್ರಕ್ಕೆ 6,000 ರೂ., ಈ ತಮ್ಮ ವಾಹನದ ಎರಡೂ ಚಕ್ರ ಕಳವಾಗಿವೆ. ಮತ್ತೆ ತಾವು 12,000 ರೂ. ಕೊಟ್ಟು ಹೊಸ ಚಕ್ರಗಳ ಖರೀದಿಸಿದ್ದಾಗಿ ಸುನಿಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ಬಾಡಿಗೆ ಇಲ್ಲದೇ ಕಂಗಾಲಾಗಿದ್ದ ನಮಗೆ ಇದೀಗ ವಾಹ ನದ ಚಕ್ರಗಳನ್ನೇ ಕಳಚಿಕೊಂಡು ಹೋಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಾರ್ಕ್ ಮಾಡಿದ್ದ ವಾಹನಗಳ ಬ್ಯಾಟರಿ, ಸ್ಟಿರಿಯೋ ಅಥವಾ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗುತ್ತಿತ್ತು. ಇದೀಗ ವಾಹನಗಳ ವ್ಹೀಲ್‍ಗಳನ್ನೇ ಬಿಚ್ಚಿಕೊಂಡು ಹೋಗುತ್ತಿರುವುದು ಆತಂಕ ಮೂಡಿಸಿದೆ. ಪೊಲೀಸ್ ಠಾಣೆ ಸಮೀಪವೇ ಈ ಘಟನೆ ನಡೆದಿದ್ದು, ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಚಕ್ರಗಳನ್ನೇ ಕಳಚಿ ಹೊತ್ತೊಯ್ದಿರುವುದರಿಂದ ಕಾರು, ದ್ವಿಚಕ್ರ ವಾಹನ, ಪ್ಯಾಸೆಂಜರ್ ಆಟೋ ಹಾಗೂ ಇನ್ನಿತರ ಸರಕು ಸಾಗಣೆ ವಾಹನ ಮಾಲೀಕರು ಮತ್ತು ಚಾಲಕರು ಎಚ್ಚರದಿಂದಿರಬೇಕಿದೆ.