ಮೈಸೂರು,ಸೆ.10(ಆರ್‍ಕೆ)-ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂ ರಿನ ನಜರ್‍ಬಾದಿನಲ್ಲಿರುವ ತಹಸೀಲ್ದಾರ್ ಕಚೇರಿ(ಮಿನಿ ವಿಧಾನ ಸೌಧ)ಯಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ್ರ ಇಂದಿನಿಂದ ಆರಂಭವಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಹಸೀಲ್ದಾರ್ ಕಚೇರಿ ಆಶ್ರಯದಲ್ಲಿ ಆರಂಭವಾದ ಕೇಂದ್ರವನ್ನು ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ವಿ.ದೇವಮಾನೆ ಅವರು ಟೇಪು ಕತ್ತರಿಸುವ ಮೂಲಕ ಉದ್ಘಾಟಿ ಸಿದರು. ನಂತರ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು, ಭೂ ವ್ಯಾಜ್ಯಗಳ ಇತ್ಯರ್ಥಕ್ಕೆ ಅಗತ್ಯವಿರುವ ನ್ಯಾಯವಾದಿಗಳ ಸೇವೆ ಹಾಗೂ ಇನ್ನಿತರ ಕಂದಾಯ ಸೇವೆಗಳಿಗೆ ಸಹಾಯ ಒದಗಿಸುವ ಉದ್ದೇಶದಿಂದ ಹೈಕೋರ್ಟ್ ನಿರ್ದೇಶನದ ಮೇರೆಗೆ ಉಚಿತ ಕಾನೂನು ನೆರವು ಸೇವಾ ಕೇಂದ್ರವನ್ನು ತೆರೆಯಲಾಗಿದ್ದು, ರೈತರು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನಂತರ ಮಾತನಾಡಿದ ಮೈಸೂರು ತಾಲೂಕು ತಹಸೀಲ್ದಾರ್ ಕೆ.ಆರ್. ರಕ್ಷಿತ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಕಾನೂನು ನೆರವು ನೀಡಬೇಕೆಂದು ಭಾರತದ ಸಂವಿಧಾನದ 39ಎ ವಿಧಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಕಂದಾಯ ಜಮೀನು, ಆಸ್ತಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಕಾನೂನು ತೊಡಕುಗಳ ಇತ್ಯರ್ಥಕ್ಕೆ ಜನರು ಈ ಸೇವಾ ಕೇಂದ್ರದ ನೆರವು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೇಂದ್ರದಲ್ಲಿ ಜೆನೀಫರ್ ಎಂಬ ವಕೀಲರು ಹಾಜರಿದ್ದು, ಅಗತ್ಯವಿದ್ದವರು ಅವರ ಸೇವೆಯನ್ನು ಬಳಸಿಕೊಳ್ಳ ಬಹುದು, ಸೇವಾ ಕೇಂದ್ರದ ಉದ್ಘಾಟನೆ ವೇಳೆ ಉಪವಿಭಾಗಾಧಿಕಾರಿ ಡಾ. ವೆಂಕಟರಾಜು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿವೇಕ್ ಮಹದೇವ್ ಹಾಗೂ ಇತರರು ಉಪಸ್ಥಿತರಿದ್ದರು.