ಉಡಿಗಾಲ: ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ
ಚಾಮರಾಜನಗರ

ಉಡಿಗಾಲ: ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

August 19, 2021

ಚಾಮರಾಜನಗರ, ಆ.18(ಎಸ್‍ಎಸ್)- 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಆರ್.ಉಮೇಶ್ ಅಭಿಮಾನಿ ಬಳಗ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಯಿತು.

ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಈ ಪೈಕಿ 210 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ವೀರಪ್ಪ ಉಡಿಗಾಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಉಡಿಗಾಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು. ಇದಲ್ಲದೇ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಉದ್ಘಾಟನೆ: ಶಿಬಿರವನ್ನು ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮದಲ್ಲಿ ಬೃಹತ್ ಪ್ರಮಾಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿರುವುದು ಮೆಚ್ಚುವಂತಹದ್ದು. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಡಿಗಾಲ ಗ್ರಾಮದ ಮಾಜಿ ಪ್ರಧಾನರಾದ ಕುಮಾರಸ್ವಾಮಿ ಮಾತನಾಡಿ, ಎಲ್ಲೆಡೆ ಕೊರೊನಾ ಇರುವುದರಿಂದ ಈ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ತಪಾಸಣಾ ಶಿಬಿರ ಏರ್ಪಡಿಸಿದ್ದಕ್ಕೆ ಗ್ರಾಮಸ್ಥರ ಪರವಾಗಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ವೇಳೆ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಆರ್.ಉಮೇಶ್, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಉಪಾಧ್ಯಕ್ಷೆ ಮುದ್ದಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಎ.ಎಸ್.ಗುರುಸ್ವಾಮಿ, ಕುಮಾರ್, ಸಿದ್ದರಾಜು, ಮಹದೇವು, ಪುರುಷೋತ್ತಮ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ನಾಗರಾಜೇಗೌಡ, ಚೂಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿಖಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಸ್ವಾಮಿ, ಬಸುಮರಿ, ಪ್ರಕಾಶ, ರಾಜಣ್ಣ, ಮಲ್ಲೇಗೌಡ, ಇಸ್ಮಾಯಿಲ್, ಆಜಯ್ಯ, ಗಿರೀಶ್, ಶಾಂತಪ್ಪ, ರಂಗಸ್ವಾಮಿ, ಮಹದೇವಸ್ವಾಮಿ, ಆರ್.ಉಮೇಶ್ ಅಭಿಮಾನಿ ಬಳಗದ ಕರಿನಂಜಪುರ ಎಂ.ಸ್ವಾಮಿ, ಆಜಯ್, ಶಂಭು, ಸೈಯದ್ ಇಸ್ಮಾಯಿಲ್ ಇತರರು ಉಪಸ್ಥಿತರಿದ್ದರು.

Translate »