ಮಾದಪ್ಪನ ಬೆಟ್ಟದಲ್ಲಿ ಪಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ
ಚಾಮರಾಜನಗರ

ಮಾದಪ್ಪನ ಬೆಟ್ಟದಲ್ಲಿ ಪಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ

August 19, 2021

ಹನೂರು, ಆ.18(ಸೋಮು)- ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸ್ವಯಂ ಸೇವಾ ಸಂಸ್ಥೆ, ಪ್ರಾಧಿಕಾರದ ಆಡಳಿತ ಹಾಗೂ ಅರಣ್ಯ ಇಲಾಖೆಯು ಕೈಗೊಳ್ಳುವ ಅಭಿಯಾನದಲ್ಲಿ ಸಾಲೂರು ಬೃಹನ್ಮಠದ ಪಾಠಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಮಠದ ಪೀಠಾಧಿಪತಿ ವಿದ್ವಾನ್ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಸಂಬಂಧ ಮಂಗಳವಾರ ದಾಸೋಹ ಭವನದ ಆವರಣದಲ್ಲಿ ಸುರಪನೇನಿ ವಿದ್ಯಾಸಾಗರ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ಧ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯು ರಾಜ್ಯದ ಪ್ರಸಿದ್ಧ ದೇವಾಲಯವಾಗಿದ್ದು, ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ಕೆಲವು ಭಕ್ತರು ಮಾರ್ಗದ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲು, ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಇದರಿಂದ ಪರಿಸರದ ಹಾಗೂ ಅನೈರ್ಮಲ್ಯಕ್ಕೆ ಕಾರಣವಾಗಿದ್ದು, ಜೀವ ಸಂಕುಲದ ಮೇಲೆ ವ್ಯತೀರಿಕ್ತ ಪರಿಣಾಮ ಬೀರಲಿದೆ. ಈ ದಿಸೆಯಲ್ಲಿ ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪ್ರಾಧಿಕಾರದ ಆಡಳಿತ, ಅರಣ್ಯ ಇಲಾಖೆ ಹಾಗೂ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಆಗ್ಗಾಗ್ಗೆ ಅಭಿಯಾನವನ್ನು ಕೈಗೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಪಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಸಾಲೂರು ಮಠದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರಲ್ಲದೇ ಎಸ್‍ವಿಎಸ್ ಫೌಂಡಷನ್ ಕೈಗೊಂಡಿರುವ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಕ್ತರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು: ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ಮಾತನಾಡಿ, ಜನರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವುದರಿಂದ ಇಡೀ ಜಗತ್ತೆ ಪ್ಲಾಸ್ಟಿಕ್ ಮಯವಾಗಿದೆ. ಪರಿಣಾಮ ನಮಗೆ ಅರಿವಿಲ್ಲದಂತೆ ಥೈರಾಯಿಡ್, ಅಸ್ತಮ, ಹೃದಯ ಸಂಬಂಧಿ ಹಾಗೂ ಇನ್ನಿತರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪ್ರಾಣಿ- ಪಕ್ಷಿಗಳ ಆರೋಗ್ಯದ ಮೇಲೂ ವ್ಯತೀರಿಕ್ತ ಪರಿಣಾಮ ಬೀರುತ್ತಿದೆ. ಬೆಟ್ಟಕ್ಕೆ ಆಗಮಿಸುವ ಭಕ್ತರು ಎಲ್ಲೆಂದರಲ್ಲೂ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುತ್ತಿರುವುದು ವಿಷಾದನೀಯ. ಈ ದಿಸೆಯಲ್ಲಿ ಈಗಾಗಲೇ ಹಲವು ಬಾರಿ ಅಭಿಯಾನವನ್ನು ಕೈಗೊಂಡು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಭಕ್ತರಲ್ಲಿ ಜಾಗೃತಿ ಮೂಢಿಸಲಾಗಿದೆ ಎಂದರು.

ಬೆಟ್ಟಕ್ಕೆ ಬರುವ ಕೆಲವು ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಆದ್ದರಿಂದ ಇನ್ನು ಮುಂದಾದರೂ ಬೆಟ್ಟಕ್ಕೆ ಆಗಮಿಸುವ ಭಕ್ತರು ಸ್ವಯಂ ಪ್ರೇರಿತವಾಗಿ ಪ್ಲಾಸ್ಟಿಕ್ ವಸ್ಥುಗಳನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಎಸ್‍ವಿಎಸ್ ಫೌಂಡೇಷನ್‍ನ ಮುಖ್ಯಸ್ಥ ವಿದ್ಯಾಸಾಗರ್ ಅವರು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಬುಟ್ಟಿಗಳನ್ನು ಪ್ರಾಧಿಕಾರ ಅಡಳಿತದ ಅಧಿಕಾರಿಗಳಿಗೆ ವಿತರಿಸಿದರು. ಅಲ್ಲದೇ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮಾಸ್ಕ್, ಕೈಗವಸುಗಳನ್ನು ನೀಡಲಾಯಿತು. ಪ್ರಾಧಿಕಾರದ ವತಿಯಿಂದ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ದೇವಸ್ಥಾನದ ಅರ್ಚಕ ಕೆ.ವಿ.ಮಾದೇಶ್, ಪ್ರಾಧಿಕಾರದ ನೌಕರರು, ಗ್ರಾಪಂ ಸದಸ್ಯರು ಹಾಗೂ ಇನ್ನಿತರರು ಭಾಗವಹಿಸಿದ್ದರು.

Translate »