ಯಳಂದೂರು, ಆ.18- ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಕುರ್ಚಿ ಮೇಲೆ ಕುಳಿತಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಪರೂಪದ ಪ್ರತಿಮೆಯನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ಈ ಪ್ರತಿಮೆ ದಕ್ಷಿಣ ಭಾರತದಲ್ಲೇ ವಿಶೇಷವಾದದ್ದು ಎಂದು ಹೇಳಲಾಗುತ್ತಿದೆ.
4.3 ಅಡಿ ಎತ್ತರದ ಪೀಠದಲ್ಲಿ 9.9 ಅಡಿ ಎತ್ತರದ ಅಂಬೇಡ್ಕರ್ ಕುರ್ಚಿಯ ಮೇಲೆ ಕುಳಿತಿರುವ ಪ್ರತಿಮೆ ಅಪರೂಪದ್ದಾಗಿದೆ. ದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್‍ನಲ್ಲಿ ಇರುವ ಭಂಗಿಯಲ್ಲಿ ಇದನ್ನು ರೂಪಿಸಲಾಗಿದೆ.
ಫೈಬರ್‍ನಲ್ಲಿ ರೂಪಿತಗೊಂಡಿರುವ ಪ್ರತಿಮೆಯನ್ನು ನೆರೆಯ ಆಂಧ್ರಪ್ರದೇಶದ ಶಿಲ್ಪಿಗಳು ರೂಪಿಸಿದ್ದಾರೆ. ಒಟ್ಟು 15 ಲಕ್ಷ ರೂ ವೆಚ್ಚದಡಿ ಪುತ್ಥಳಿ ಸುತ್ತಲೂ ಕಟ್ಟಡ ಪ್ರಾಂಗಣ, ವಿದ್ಯುತ್ ದೀಪಗಳು, ಪಾರ್ಕ್ ಮತ್ತಿತರ ಸೌಲಭ್ಯ ಕಲ್ಪಿಸಲಾಗಿದೆ.
ಬುದ್ಧನ ನಂತರ ಅಂಬೇಡ್ಕರ್ ಪ್ರತಿಮೆ ಹೆಚ್ಚು ನಿರ್ಮಾಣ: ಪ್ರತಿಮೆ ಅನಾವರಣದ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ವಿಶ್ವದಲ್ಲಿ ಬುದ್ದನನ್ನು ಬಿಟ್ಟರೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳು ಹೆಚ್ಚು ನಿರ್ಮಾಣವಾಗಿವೆ ಎಂದರು.
ಜಿಲ್ಲೆಯಲ್ಲೇ ಅಂಬೇಡ್ಕರ್ ಅವರ ಅತೀ ದೊಡ್ಡ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆ ನಿರ್ಮಾಣ ಮಾಡುವುದಷ್ಟೇ ಅಲ್ಲ, ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಸಲಹೆ ನೀಡಿದರು.
ಹೊನ್ನೂರು ಗ್ರಾಮದಲ್ಲಿ ವಿದ್ಯಾವಂತರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೂ, ಗ್ರಾಮದಲ್ಲಿ ಮೌಢ್ಯತೆ ಹೆಚ್ಚಾಗಿದೆ. ಗ್ರಾಮಸ್ಥರು ಹಬ್ಬ- ಆಚರಣೆಗಳನ್ನು ಹೆಚ್ಚಾಗಿ ಮಾಡಿ, ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಐಎಎಸ್ ತರಬೇತಿದಾರ ಡಾ.ಶಿವಕುಮಾರ್ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಪ್ರತಿಮೆ ನಿರ್ಮಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಯುವಜನ ಮತ್ತು ವಿದ್ಯಾರ್ಥಿ ಸಂಘವು ಪ್ರಯತ್ನಿಸುತ್ತಿದ್ದು, ಪ್ರಸ್ತುತ ಸ್ಥಳೀಯ ಶಾಸಕರು, ಗ್ರಾಮದ ಚುನಾಯಿತ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ನೌಕರರು, ಗುತ್ತಿಗೆದಾರರು ಹಾಗೂ ಗ್ರಾಮಸ್ಥರ ನೆರವಿನಿಂದ ಪ್ರತಿಮೆ ನಿರ್ಮಿಸಿ ಅನಾವರಣಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಹೆಚ್.ಬಸವಯ್ಯ, ಗ್ರಾಪಂ ಅಧ್ಯಕ್ಷೆ ಟಿ.ಎನ್.ರಾಧ, ಉಪಾಧ್ಯಕ್ಷ ಶಿವಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್, ಜಿಪಂ ಮಾಜಿ ಸದಸ್ಯ ಜೆ.ಯೋಗೇಶ್, ಡಾ.ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರೇವಣ್ಣ, ಸಂಘದ ಅಧ್ಯಕ್ಷ ರವಿಚಂದ್ರ ಹಾಗೂ ಪದಾಧಿಕಾರಿಗಳು, ಗ್ರಾಮದ ಯಜಮಾನರು, ಮುಖಂಡರು, ಸ್ವಸಹಾಯ ಸಂಘದ ಮಹಿಳೆಯರು ಹಾಜರಿದ್ದರು.