ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕಾಣದ ಜನಜಂಗುಳಿ
ಮೈಸೂರು

ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕಾಣದ ಜನಜಂಗುಳಿ

August 31, 2020

ಸತತ ಕೆಲಸ ಮಾಡಿದ್ದ ವೈದ್ಯರು, ಲ್ಯಾಬ್ ಟೆಕ್ನಿಷಿಯನ್‍ಗೆ ಭಾನುವಾರ ವಿಶ್ರಾಂತಿ
ಮೈಸೂರು, ಆ.30(ಆರ್‍ಕೆಬಿ)- ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಆರ್‍ಎಟಿ)ನಲ್ಲಿ ದೀರ್ಘ ಕಾಲ ಪಾಲ್ಗೊಂಡಿದ್ದ ಕೆಲ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ ಮತ್ತು ಇತರೆ ಸಿಬ್ಬಂದಿಗೆ ವಿಶ್ರಾಂತಿ ನೀಡುವ ಸಲುವಾಗಿ ಟೌನ್‍ಹಾಲ್ ಸೇರಿದಂತೆ ಕೆಲವು ಆರ್‍ಎಟಿ ಕೇಂದ್ರಗಳಿಗೆ ಭಾನುವಾರ ರಜೆ ನೀಡಲಾಗಿತ್ತು.

ಭಾನುವಾರವಾದ್ದರಿಂದ ಕೃಷ್ಣಮೂರ್ತಿಪುರಂನ ಮಕ್ಕಳ ಕೂಟ, ಚಾಮುಂಡಿಪುರಂನ ಅಕ್ಕಮ್ಮಣ್ಣಿ ಆಸ್ಪತ್ರೆ, ಕೆ.ಆರ್. ಆಸ್ಪತ್ರೆಗಳಲ್ಲಿ ಅಷ್ಟೇನೂ ಜನಜಂಗುಳಿ ಕಂಡು ಬರ ಲಿಲ್ಲ. ಟೌನ್‍ಹಾಲ್‍ನಲ್ಲಿ ಕೋವಿಡ್ ಪರೀಕ್ಷೆಗಾಗಿ ಬಹಳ ದೂರದಿಂದ ಬಂದಿದ್ದ ಅನೇಕರು ಕೆಲಕಾಲ ಕಾದು ನಿರಾಶೆಯಿಂದ ಹಿಂತಿರುಗಿದರು. ಟೌನ್ ಹಾಲ್‍ನಲ್ಲಿಂದು ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸುವುದಿಲ್ಲ ಎಂಬ ಫಲಕ ಹಾಕಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ಕೂಟದಲ್ಲಿ ಕನಿಷ್ಠ 200 ಮಂದಿಗೆ, ಅಕ್ಕಮ್ಮಣ್ಣಿ ಆಸ್ಪತ್ರೆಯಲ್ಲಿ 50 ಹಾಗೂ ವಿಶ್ವೇಶ್ವರನಗರದ ಬಿಲ್ಡರ್ಸ್ ಅಸೋಸಿಯೇಷನ್ ಕಟ್ಟಡದಲ್ಲಿನ ಪರೀಕ್ಷಾ ಕೇಂದ್ರ ದಲ್ಲಿ 100 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲು ಗುರಿ ನೀಡಲಾಗಿತ್ತು. ಭಾನುವಾರವಾದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಹೆಚ್ಚು ಜನ ಬರಲಿಲ್ಲ. ಮಕ್ಕಳ ಕೂಟದಲ್ಲಿ 60ಕ್ಕೂ ಅಧಿಕ ಮಂದಿ, ಅಕ್ಕಮ್ಮಣ್ಣಿ ಆಸ್ಪತ್ರೆಯಲ್ಲಿ 25 ಮಂದಿ ಟೆಸ್ಟ್ ಮಾಡಿಸಿಕೊಂಡರು. ಆದರೆ ಬಿಲ್ಡರ್ಸ್ ಅಸೋಸಿಯೇಷನ್ ಕೇಂದ್ರದಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಕಾದರೂ ಒಬ್ಬರೂ ಬರಲಿಲ್ಲ.

30 ಕೇಸ್: ಮಕ್ಕಳ ಕೂಟದಲ್ಲಿ ಶನಿವಾರ 88 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 30 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ.

Translate »