ಯುವಪೀಳಿಗೆ ನಿಸ್ವಾರ್ಥದಿಂದ  ದೇಶ ಕಟ್ಟಲು ಶ್ರಮಿಸಬೇಕು
ಮೈಸೂರು

ಯುವಪೀಳಿಗೆ ನಿಸ್ವಾರ್ಥದಿಂದ ದೇಶ ಕಟ್ಟಲು ಶ್ರಮಿಸಬೇಕು

January 14, 2022

ಮೈಸೂರು, ಜ.13- ಯುವಕರು ನಿಸ್ವಾರ್ಥ ಸೇವೆಯಿಂದ ದೇಶವನ್ನು ಕಟ್ಟುವಂತಹ ಪ್ರತಿಜ್ಞೆ ಮಾಡಬೇಕು ಎಂಬುದು ಸ್ವಾಮಿ ವಿವೇಕಾಂದರ ಅಪೇಕ್ಷೆಯಾಗಿತ್ತು. ಅವರ ಆಶಯದಂತೆ ಇವತ್ತಿನ ಯುವ ಪೀಳಿಗೆ ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿಂದೂಸ್ಥಾನ್ ಕಾಲೇಜು-ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಹಿಂದುಸ್ತಾನ್ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಎಂಬ ಪದವನ್ನು ಕೇಳಿರುತ್ತಾರೆ. ಆದರೆ ಆ ಸ್ವಾತಂತ್ರ್ಯ ಹೇಗೆ ಬಂತು, ಯಾರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದರು ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವಲ್ಲಿ ಹಿಂದೆ ಇದ್ದಾರೆ ಎಂದರು.

ಸ್ವಾಮಿ ವಿವೇಕಾನಂದರು ದೇಶಕ್ಕೆ ಮಹತ್ತರದ ಸ್ಥಾನ ತಂದುಕೊಡುವಲ್ಲಿ ಅವರ ಶಕ್ತಿ, ಅವರ ಕರ್ತವ್ಯ ಹಾಗೂ ಪರಿಶ್ರಮ ಕಾರಣವಾಗಿದೆ. ಸ್ವಾಮಿ ವಿವೇಕಾನಂದರಿಗೂ ಮೈಸೂರಿಗೂ ಸಂಬಂಧ ಇದೆ. ವಿವೇಕಾನಂದರು ಅಮೇರಿಕಾಗೆ ತೆರಳಲು ಧನ ಸಹಾಯ ಮಾಡಿದ್ದೆ ಮೈಸೂರಿನ ಅರಸರು. ಹಿಂದೂ ಧರ್ಮ ಪುನರುತ್ಥಾನ ಮಾಡಲು ಅನೇಕ ಹಿರಿಯರು ಕಾರ್ಯನಿರ್ವಹಿಸುತ್ತಾರೆ. ಆದರೆ ವಿವೇಕಾನಂದರು ಅತೀ ಕಿರಿಯ ವಯಸ್ಸಿನಲ್ಲೇ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಹ ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಪ್ರೇಮ್‍ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಹಿಂದೂಸ್ಥಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜೆ.ಪ್ರಿಯಾ ಸೇರಿದಂತೆ ಇತರರು ಹಾಜರಿದ್ದರು.

Translate »