ಮೈಸೂರು, ಮೇ 21(ಪಿಎಂ)- ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನೇ ಬೋಗಸ್ ಎಂದು ರಾಜ್ಯದ ವಿರೋಧ ಪಕ್ಷದ ನಾಯಕರು ಟೀಕಿಸಿರುವುದನ್ನು ನೋಡಿದರೆ ಇವರು ವಿಪಕ್ಷ ನಾಯಕರಾಗಲು ಅಯೋಗ್ಯರು ಎನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಸುತ್ತೂರು ಮಠಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿ ವರು, ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸ ಎಂದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.
ಪ್ರಧಾನಿ ಮೋದಿ ಅವರು ಯಾರನ್ನೂ ಕೇಳದೇ ಪ್ಯಾಕೇಜ್ ಘೋಷಿಸಿದರು ಎಂದು ಈ ನಾಯಕರಿಬ್ಬರು ಟೀಕಿಸಿದ್ದಾರೆ. ಇನ್ನು ಮುಂದೆ ಯಾವುದೇ ಪ್ಯಾಕೇಜ್ ಘೋಷಿಸಬೇಕಾದರೂ ಇವರನ್ನು ಕೇಳಿ ಎಂದು ಪ್ರಧಾನಿಗಳಿಗೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಇವರಿಗೆ ತಮ್ಮ ನಾಯಕಿಯನ್ನು ತೃಪ್ತಿಪಡಿಸಿದರೆ ಸಾಕು ಎನಿಸುತ್ತದೆ ಎಂದು ಕುಟುಕಿದರು.
ಸಂವಿಧಾನದ ಬಗ್ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಉದ್ದುದ್ದ ಭಾಷಣ ಮಾಡು ತ್ತಾರೆ. ಆದರೆ ಅನುಮತಿ ಪಡೆಯದೇ ವಿಧಾನ ಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗ್ರಾಪಂಗಳಿಗೆ ಸಮಿತಿ ರಚಿಸುವುದನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿ ದ್ದಾರೆ. ಇದು ಸಂವಿಧಾನಾತ್ಮಕ ನಡೆಯೇ? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಗ್ರಾಪಂಗಳಿಗೆ ಆಡಳಿತ ಸಮಿತಿ ನೇಮಿಸು ವುದು ಸರ್ಕಾರದ ದಿಢೀರ್ ತೀರ್ಮಾನವಲ್ಲ. ಅಡ್ವೊಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಘೋಷಣೆ ಮಾಡ ಲಾಗಿದೆ. ಗ್ರಾಪಂ ಅವಧಿ ಮುಗಿದಿದ್ದು, ಸಂವಿಧಾನಬದ್ಧವಾಗಿಯೇ ಆಡಳಿತ ಸಮಿತಿ ನೇಮಿಸಲು ನಿರ್ಧರಿಸಲಾಗಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ನಗರಪಾಲಿಕೆಯ ಬಿಜೆಪಿ ಆಡಳಿತವನ್ನು ದಿಢೀರ್ ರದ್ದುಗೊಳಿಸಿ ಕಾಂಗ್ರೆಸ್ ಪಕ್ಷ ವನ್ನು ಆಡಳಿತಕ್ಕೆ ತಂದರು. ಹೀಗಿರುವಾಗ ಈಗ ಆರೋಪಿಸಲು ಇವರಿಗೆ ಯಾವ ನೈತಿ ಕತೆ ಇದೆ? ಎಂದು ಪ್ರಶ್ನಿಸಿದರು.
ಗ್ರಾಪಂ ಆಡಳಿತ ಸಮಿತಿಗೆ ರೋಸ್ಟರ್ ಪದ್ಧತಿಯಂತೇ ಸದಸ್ಯರನ್ನು ನೇಮಿಸಲಾಗು ವುದು. ಕಾಂಗ್ರೆಸ್‍ನವರನ್ನು ಕೇಳಿ ಆಡಳಿತ ನಡೆ ಸುವ ಅಗತ್ಯ ನಮಗಿಲ್ಲ. ದೇಶವೇ ಮೆಚ್ಚುವ ರೀತಿ ರಾಜ್ಯದಲ್ಲಿ ನಾವು ಆಡಳಿತ ನಡೆಸುತ್ತಿ ದ್ದೇವೆ. ಕೊರೊನಾ ಸೋಂಕು ನಿಯಂತ್ರಣ ಕ್ರಮಗಳನ್ನು ನೋಡಿ ವಿಶ್ವವೇ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ಸಿಗರು ಮಾತ್ರ ಟೀಕಿಸುತ್ತಾರೆ ಎಂದು ಕಿಡಿಕಾರಿದರು. ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷ ಮಹೇಂದ್ರ ಮತ್ತಿತರರು ಹಾಜರಿದ್ದರು.