ಮೈಸೂರು, ಮೇ 30(ಎಂಟಿವೈ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅತ್ಯುತ್ತಮವಾಗಿ ಕೆಲಸ ಮಾಡು ತ್ತಿದ್ದಾರೆ. ನಾಯಕತ್ವದ ವಿರುದ್ಧ ಯಾರೂ ಧ್ವನಿ ಎತ್ತಿಲ್ಲ. ಖಾಲಿಯಾಗಲಿರುವ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ನಡೆ ಯಲಿರುವ ಚುನಾವಣೆಗೆ ಸಂಬಂಧಿಸಿ ಕೆಲವು ಹಿರಿಯ ಶಾಸಕರು ಬೆಂಗಳೂರಲ್ಲಿ ಸಭೆ ಸೇರಿದ್ದರು ಅಷ್ಟೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು 24×7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರೊಬ್ಬರೂ ನಾಯ ಕತ್ವ ಬದಲಿಸುವಂತೆ ಒತ್ತಾಯಿಸಿಲ್ಲ. ಎಲ್ಲರ ಸಹಕಾರದಿಂದ ಬಿಎಸ್‍ವೈ ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗಷ್ಟೇ ಸೀಮಿತ: ಚುನಾವಣೆ ಸಂದರ್ಭ ಸಭೆ ನಡೆಸು ವುದು, ಪಕ್ಷಕ್ಕಾಗಿ ದುಡಿದವರನ್ನು ನೇಮಕ ಮಾಡುವಂತೆ ಒತ್ತಡ ಹೇರುವುದು ಸಹಜ. ಅದೇ ರೀತಿ ಈಗಲೂ ಒತ್ತಡ ಹೇರಲು ಸಭೆ ನಡೆಸಿದ್ದಾರೆ. ಇದನ್ನೇ ಭಿನ್ನಮತ ಸಭೆ ಎನ್ನುವುದು ಸರಿಯಲ್ಲ ಎಂದರು.
ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಮನೆಗೆ 5 ನಾಮ ನಿರ್ದೇಶನ ಸ್ಥಾನಗಳಿಗೆ ನಾಮಕರಣ ಪರಮಾಧಿಕಾರವನ್ನು ಮುಖ್ಯಮಂತ್ರಿಗಳಿಗೇ ನೀಡಲಾಗಿದೆ. ಪ್ರಸ್ತುತ 5 ನಾಮ ನಿರ್ದೇಶನ ಸ್ಥಾನ, ಶಾಸಕರಿಂದ ಆಯ್ಕೆಯಾಗುವ 5 ಸ್ಥಾನ, ಉಳಿದವು ಚುನಾ ವಣೆಯಿಂದ ಆಯ್ಕೆ ಸೇರಿದಂತೆ 16 ಸ್ಥಾನವಿದೆ. ಅದರಲ್ಲಿ 9 ಸ್ಥಾನ ಬಿಜೆಪಿಗೆ ಲಭಿಸಲಿದೆ. 4 ರಾಜ್ಯಸಭಾ ಸ್ಥಾನಗಳಲ್ಲಿ 2 ಬಿಜೆಪಿ ಪಾಲಾಗಲಿವೆ. ಪರಿಷತ್‍ನ 6 ಸ್ಥಾನಗಳಿಗೆ ನಡೆಯಲಿರುವ ಚುನಾ ವಣೆಯಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಲಿದೆ. ಸಮು ದಾಯಕ್ಕೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಆರೋಪದ ಮೇರೆಗೆ ಸಭೆ ನಡೆದಿದೆ. ಇದು ಯಾರದೇ ವಿರುದ್ಧದ ಸಭೆಯಲ್ಲ ಎಂದರು.
ಹೈಕಮಾಂಡ್ ನಿಲುವು: ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಮುಖ್ಯಮಂತ್ರಿಗಳು ಎಲ್ಲಾ ಶಾಸಕರ ಸಭೆ ಕರೆದು ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಂಡಿದ್ದಾರೆ. ಇಂತಹ ಸಂದರ್ಭ ಒಂದಿಬ್ಬರು ಹೇಳಿದ ಮಾತ್ರಕ್ಕೆ ನಾಯಕತ್ವ ಬದಲಿಸಲು ಆಗುವುದಿಲ್ಲ. ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರೇ ಮುಂದುವರೆಯುವುದು ಖಚಿತ ಎಂದರು.
ಹುಡುಗಾಟವಲ್ಲ: ಹೈಕಮಾಂಡ್ ಒಪ್ಪಿದರೆ ಇನ್ನೂ 22 ಕೈ ಶಾಸಕ ರಿಂದ ರಾಜೀನಾಮೆ ಕೊಡಿಸುವುದಾಗಿ ಸಚಿವ ರಮೇಶ್ ಜಾರಕಿ ಹೊಳಿ ನೀಡಿದ ಹೇಳಿಕೆಗೆ ಅಸಮಾಧಾನಗೊಂಡ ಸಚಿವರು, ಇದೇನು ಹುಡುಗಾಟಿಕೇನಾ? ಸರ್ಕಾರ ನಡೆಸಲು ಬೇಕಾದಷ್ಟು ಸದಸ್ಯರನ್ನು ಪಕ್ಷ ಹೊಂದಿದೆ. ಸರ್ಕಾರ ಸಮೃದ್ಧವಾಗಿ, ಸುಗಮವಾಗಿ ಸಾಗುತ್ತಿದೆ. ಮತ್ತಷ್ಟು ಶಾಸಕರನ್ನು ಕರೆತರುವುದಾದರೂ ಏಕೆ? ಅದರ ಅಗತ್ಯವಿಲ್ಲ. ರಮೇಶ್ ಜಾರಕಿಹೊಳಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ತಿಳಿದಿಲ್ಲ. ಅವರನ್ನೇ ಕೇಳಿ ಎಂದು ಮಾರ್ಮಿಕವಾಗಿ ನುಡಿದರು.