ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿ ವಿವಿ ಪದವಿ ಪರೀಕ್ಷೆ ನಡೆಸಿ
ಮೈಸೂರು

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾದರಿ ವಿವಿ ಪದವಿ ಪರೀಕ್ಷೆ ನಡೆಸಿ

July 9, 2020

ಮೈಸೂರು, ಜು.8(ಪಿಎಂ)- ರಾಜ್ಯದಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಮಾದರಿಯಲ್ಲಿ ಯುಜಿಸಿ ನಿಗದಿಗೊಳಿಸಿದ ಅವಧಿಯೊಳಗೆ ರಾಜ್ಯದ ವಿಶ್ವವಿದ್ಯಾನಿಲಯಗಳ ಪದವಿ ಪರೀಕ್ಷೆಗಳನ್ನು ನಡೆಸಲು ಸೂಕ್ತ ಕ್ರಮ ವಹಿಸುವಂತೆ ಉಪ ಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಅವರನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪತ್ರ ಮುಖೇನ ಕೋರಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್ ಅಂತ್ಯ ದೊಳಗೆ ಕಾಲೇಜು, ವಿಶ್ವವಿದ್ಯಾನಿಲಯಗಳು ಪರೀಕ್ಷೆ ನಡೆಸುವಂತೆ ಯುಜಿಸಿ (ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ) ಪರಿಷ್ಕøತ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿದ ರೀತಿಯಲ್ಲಿ ವಿಶ್ವವಿದ್ಯಾನಿಲಯಗಳ ಪದವಿ, ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಪರೀಕ್ಷೆಗಳನ್ನೂ ಯುಜಿಸಿ ನಿಗದಿ ಗೊಳಿಸಿದ ಅವಧಿಯೊಳಗೆ ನಡೆಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಪ್ರವೇಶಕ್ಕೆ ಸಿಇಟಿ ಮೂಲಕ ಸೀಟು ಹಂಚಿಕೆ ಯಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಜಿಲ್ಲೆ ಹಾಗೂ ರಾಜ್ಯ ಹೊರತಾಗಿ ಬೇರೆ ಭಾಗದಲ್ಲಿ ವ್ಯಾಸಂಗ ಮಾಡುವ ಸಂಖ್ಯೆಯೂ ಹೆಚ್ಚಿದೆ. ಸೀಟು ದೊರೆತ ಸ್ಥಳಗಳಲ್ಲಿರುವ ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ವಾಸವಿದ್ದು, ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳು ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿದ್ದಾರೆ. ಹೀಗಾಗಿ ಇಂತಹ ವಿದ್ಯಾರ್ಥಿ ಗಳು ಮೂಲ ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ಬರೆಯಲು ಸಾಧ್ಯ ವಿಲ್ಲ. ಈ ಹಿನ್ನೆಲೆಯಲ್ಲಿ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದಂತೆ ಅವರ ವಾಸಸ್ಥಳಕ್ಕೆ ಹತ್ತಿರವಿರುವ ವಿವಿ ಪರೀಕ್ಷಾ ಕೇಂದ್ರ ಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಗಳಿಗೆ ಹಾಗೂ ಪರೀಕ್ಷೆ ನಡೆಸುವ ಸಿಬ್ಬಂದಿಗೆ ಎಲ್ಲಾ ರೀತಿಯ ಆರೋಗ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಿ ಮೂಲಭೂತ ಸೌಲಭ್ಯಗಳನ್ನು ಮುಂಜಾಗ್ರತೆಯಾಗಿ ಸಿದ್ಧಗೊಳಿಸಿ ನೀಡಬೇಕು. ಜೊತೆಗೆ ಪರೀಕ್ಷೆಗಳನ್ನು ಯುಜಿಸಿ ನಿಗದಿತಗೊಳಿಸಿದ ಅವಧಿಯೊಳಗೆ ನಡೆಸು ವಂತೆ ಎಲ್ಲಾ ವಿವಿಗಳಿಗೂ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿ ಗಳಿಗೆ ಆನ್‍ಲೈನ್ ಬೋಧನೆ ಮೂಲಕ ಪಠ್ಯಕ್ರಮಗಳನ್ನು ಪೂರ್ಣಗೊಳಿಸಿದರೂ ಕೆಲವರಿಗೆ ಅನಾನುಕೂಲತೆಯಿಂದ ಆನ್‍ಲೈನ್ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ವಿದ್ಯಾರ್ಥಿಗಳಿಗೆ 15 ದಿನಗಳ ವಿಶೇಷ ತರಗತಿ ನಡೆಸಬೇಕು. ಪದವಿಪೂರ್ವ ಶಿಕ್ಷಣ ಇಲಾಖೆಯ ಮೌಲ್ಯ ಮಾಪನ ಕಾರ್ಯ ಮುಕ್ತಾಯಗೊಂಡಿದ್ದು, ಫಲಿತಾಂಶ ಸದ್ಯದಲ್ಲಿಯೇ ಹೊರ ಬೀಳಲಿದೆ. ಹೀಗಾಗಿ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬೇಕಿರುವ ಕಾರಣ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶೀಘ್ರವಾಗಿ ಪ್ರಕಟಿಸುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.

Translate »