ಜ.3ರಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ಅಭಿಯಾನ
ಮೈಸೂರು

ಜ.3ರಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ಅಭಿಯಾನ

December 30, 2021

ಮೈಸೂರು, ಡಿ.29(ಎಂಟಿವೈ)- ರೂಪಾಂತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕಿನ ಅಪಾಯದಿಂದ ಮಕ್ಕಳು ಮತ್ತು ಯುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಹಾಕುವ ಅಭಿಯಾನ ಆರಂಭಿಸಿದ್ದು, ಮೈಸೂರು ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಜ.3ರಿಂದ ರಾಜ್ಯಾದ್ಯಂತ 15 ವರ್ಷದಿಂದ 18 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ 15ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಲಸಿಕೆ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

1.47 ಲಕ್ಷ ಗುರಿ: ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಜನನ ವಿಭಾಗದ ಅಂಕಿ-ಅಂಶದಂತೆ ಪ್ರತಿವರ್ಷ 50 ಸಾವಿರ ಮಕ್ಕಳು ಜನಿಸುತ್ತಿದ್ದು, ಆ ಅಂಕಿ-ಅಂಶದಂತೆ 2007ರಿಂದ ಜನಿಸಿದ ಮಕ್ಕಳ ಪಟ್ಟಿ ಮಾಡಲಾಗಿದ್ದು, ಅದರಲ್ಲಿ 1.50 ಲಕ್ಷ ಮಂದಿ ಮೈಸೂರು ಜಿಲ್ಲೆಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಗೆ ನೀಡಿರುವ ಮಾಹಿತಿಯಂತೆ 1.47 ಲಕ್ಷ ಮಂದಿಗೆ ಲಸಿಕೆ ಹಾಕಲು ಪಟ್ಟಿ ತಯಾರಿಸಲಾಗಿದೆ. ಕೆಲವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಾಗಿದ್ದರೆ, ಬಹುತೇಕ ಮಂದಿ ಪ್ರಥಮ ಪಿಯುಸಿ ವಿದ್ಯಾರ್ಥಿ ಗಳಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಕೆಲವರು 18 ವರ್ಷದವರಾಗಿದ್ದು, ಅವರೂ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ವಿವಿಧ ಕಾರಣದಿಂದ ಶಾಲೆ ಬಿಟ್ಟು ಮನೆಯಲ್ಲೇ ಇರುವ 15ರಿಂದ 18ವರ್ಷದೊಳಗಿನವರನ್ನು ಗುರುತಿಸುವಂತೆ ಸೂಚಿಸಲಾಗಿದೆ.

200 ಕೇಂದ್ರಗಳಲ್ಲಿ ಲಸಿಕೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಮಾತನಾಡಿ, ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರು ಹಾಗೂ 65 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಮುಂಚೂಣಿ ಸಿಬ್ಬಂದಿಗಳಿಗೆ ಲಸಿಕೆ ಹಾಕಲು ಸುಮಾರು 400 ಕೇಂದ್ರ ಸ್ಥಾಪಿಸಲಾಗಿದೆ. ಇದೀಗ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಸುಮಾರು 200 ತಂಡ ರಚಿಸಲು ಉದ್ದೇಶಿಸಲಾಗಿದೆ ಎಂದರು. ಈ 200 ತಂಡಗಳಿದ ದಿನಕ್ಕೆ 30 ಸಾವಿರ ಲಸಿಕೆ ನೀಡಿದರೆ, ಒಂದು ವಾರದೊಳಗೆ 1.47 ಲಕ್ಷ ಮಂದಿಗೂ ಲಸಿಕೆ ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಪೋಷಕರು ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಿದರೆ ನಿಗದಿತ ಸಮಯದೊಳಗೆ ಲಸಿಕೆ ಹಾಕಲು ಸುಲಭವಾಗುತ್ತದೆ ಎಂದರು.

ಇದರ ಜೊತೆಗೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಅಭಿಯಾನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಂದುವರೆಯಲಿದೆ. ಎಲ್ಲರಿಗೂ ಲಸಿಕೆ ಹಾಕಲು ಬೇಕಾದ ಲಸಿಕೆ ದಾಸ್ತಾನು ಇಡಲಾಗಿದೆ. ಇನ್ನು ಮೊಬೈಲ್ ಯುನಿಟ್‍ಗಳನ್ನೂ ಲಸಿಕೆ ಅಭಿಯಾನದಲ್ಲಿ ಬಳಸಿ ಕೊಳ್ಳಲಾಗುತ್ತದೆ. ಡಿಡಿಪಿಐ, ಡಿಡಿಪಿಯು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಈಗಾಗಲೆ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿಯಂತೆ 1.47 ಲಕ್ಷ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿ ನಮ್ಮ ಮುಂದೆ ಇದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಒಂದೆಡೆಯಿಂದ ಮತ್ತೊಂದೆಡೆ ಕರೆದೊಯ್ಯಲು ಅಥವಾ ಬರುವಂತೆ ಹೇಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ಶಾಲೆ ಮತ್ತು ಕಾಲೇಜುಗಳಲ್ಲೇ ಲಸಿಕೆ ಹಾಕಲು ನಿರ್ಧರಿಸಲಾಗಿದೆ. ಜ.3ರಿಂದ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳು, ಯುವಜನರಿಗೆ ಲಸಿಕೆ ನೀಡಲು ಅಭಿಯಾನ ಆರಂಭಿಸಲಾಗುತ್ತಿದ್ದು, ಜನರ ಸಹಕಾರ ಅಗತ್ಯವಿದೆ ಎಂದರು.

Translate »