ವಚನ ಸಾಹಿತ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದು!
ಮೈಸೂರು

ವಚನ ಸಾಹಿತ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲಾಗದು!

September 29, 2021

ಮೈಸೂರು,ಸೆ.28(ಪಿಎಂ)-ಜನಪ್ರಿಯ ವಚನಗಳನ್ನು ಮಾತ್ರ ಉದ್ಘರಿಸಿ ವಚನ ಸಾಹಿತ್ಯ ಸರಳ-ಸುಲಭ ಎನ್ನುವುದು ಹೆಚ್ಚು ರೂಢಿಯಲ್ಲಿದೆ. ಆದರೆ ಇಲ್ಲಿಯೂ ಸುಲಭವಾಗಿ ಅರ್ಥೈಸಿಕೊಳ್ಳಲಾಗದ ಹಲವು ಕ್ಲಿಷ್ಟಕರ ಅಂಶಗಳಿವೆ ಎಂದು ಸಂಶೋಧಕ ಮತ್ತು ವಿಮರ್ಶಕ ಡಾ.ಬಸವರಾಜ ಕಲ್ಲುಡಿ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿವಿ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಚಿಂತನ ಚಿತ್ತಾರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಹಿರಿಯ ವಿಮರ್ಶಕ ಪ್ರೊ.ಓ. ಎಲ್.ನಾಗಭೂಷಣಸ್ವಾಮಿ ಅವರ `ವಚನ ಪ್ರಶ್ನೋತ್ತರ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೇವಲ ಜನಪ್ರಿಯ ವಚನಗಳನ್ನು ಮಾತ್ರ ಉದ್ಘರಿಸಿ ವಚನ ಸಾಹಿತ್ಯ ಸುಲಭ ಮತ್ತು ಸರಳ ಎನ್ನುವುದೇ ಹೆಚ್ಚು ರೂಢಿಯಲ್ಲಿದೆ. ಆದರೆ ಈ ಸಾಹಿತ್ಯದಲ್ಲೂ ಕ್ಲಿಷ್ಟಕರ ಪದಗಳಿವೆ. ವಚನಗಳಲ್ಲಿ ಬರುವ ಸಂಸ್ಕøತ ಶಬ್ದಗಳನ್ನು ಅರ್ಥೈಸಿ ಕೊಂಡರೂ ಕೆಲ ಕನ್ನಡ ಶಬ್ದಗಳ ಅರ್ಥ ತಿಳಿಯಲು ಕನ್ನಡ ಪದಕೋಶವೇ ಬೇಕು ಎಂದು ಪ್ರತಿಪಾದಿಸಿದರು.

ಈ ನಿಟ್ಟಿನಲ್ಲಿ ಪೆÇ್ರ.ಓ.ಎಲ್.ನಾಗಭೂಷಣಸ್ವಾಮಿ ಅವರು ಜನಪ್ರಿಯ ವಚನಗಳ ಹೊರತಾಗಿ ಕ್ಲಿಷ್ಟಕರವಾದ ವನ್ನೇ ಆಯ್ಕೆ ಮಾಡಿಕೊಂಡು ಅವುಗಳಿಗೆ ಪ್ರಶ್ನೋತ್ತರ ನೀಡಿ, ಉಪಯುಕ್ತವಾದ `ವಚನ ಪ್ರಶ್ನೋತ್ತರ’ ಕೃತಿ ಬರೆದಿದ್ದಾರೆ. ಈ ಕೃತಿಯು ವಚನ ಸಾಹಿತ್ಯ ಓದುವ ವಿಧಾನ ವನ್ನು ಅರ್ಥ ಮಾಡಿಸುತ್ತದೆ. ಜೊತೆಗೆ ವಚನಕಾರರ ಧೋರಣೆ, ಆಲೋಚನೆ, ಚಿಂತನೆ ಮತ್ತು ವೈವಿಧ್ಯತೆ ಬಗ್ಗೆ ಈ ಪುಸ್ತಕ ಮಾಹಿತಿ ಒದಗಿಸಲಿದೆ ಎಂದರು.
ಧಾರ್ಮಿಕ ಚೌಕಟ್ಟಿನಿಂದ ಹೊರ ಬಂದು ಎಲ್ಲರೂ ವಚನ ಸಾಹಿತ್ಯವನ್ನು ಓದುತ್ತಿದ್ದಾರೆ. ಇದಕ್ಕೆ ವಚನ ಸಾಹಿತ್ಯದ ಭಾಷಾ ವಿನ್ಯಾಸ ಹಾಗೂ ಅದರಲ್ಲಿನ ಸಾಮಾಜಿಕ ಕಳಕಳಿ ಕಾರಣ. `ಅನುಭಾವ ಎಂಬುದು ನಿಗೂಢ. ಅದು ಯಾರಿಗೂ ದೊರೆಯುವುದಿಲ್ಲ’ ಎಂಬ ಪಾಶ್ಚಿಮಾತ್ಯ ಚಿಂತನೆಯನ್ನು 12ನೇ ಶತಮಾನದ ವಚನ ಸಾಹಿತ್ಯ ನಿರಾಕರಿಸುತ್ತದೆ. ವೈದಿಕ ಪರಿಭಾಷೆಯ ಧಾರ್ಮಿಕ ಚಿಂತನೆಗಳಿಗೆ ಕನ್ನಡ ದಲ್ಲೇ ಉತ್ತರ ಕೊಟ್ಟ ವಚನಕಾರರು, ಸಮಾನತೆಯ ಸಂದೇಶ ಸಾರಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿ ಕರ್ತೃ ಪೆÇ್ರ.ಓ.ಎಲ್. ನಾಗ ಭೂಷಣಸ್ವಾಮಿ, ಶ್ರೀ ಬಸವೇಶ್ವರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಜಿ.ಮಂಜುನಾಥ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಳವರ ಹುಂಡಿ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರ ಶೇಖರ್, ಚಿಂತನ ಚಿತ್ತಾರ ಪ್ರಕಾಶನದ ಪ್ರಕಾಶಕ ಚಿತ್ತಣ್ಣ ನವರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »