ಹಲವು ಹಿರಿಯ ರಂಗಕರ್ಮಿಗಳಿಗೆ ವಿವಿಧ ಪ್ರಶಸ್ತಿ ವಿತರಣೆ, ನಾಟಕ ಪ್ರದರ್ಶನ
ಮೈಸೂರು

ಹಲವು ಹಿರಿಯ ರಂಗಕರ್ಮಿಗಳಿಗೆ ವಿವಿಧ ಪ್ರಶಸ್ತಿ ವಿತರಣೆ, ನಾಟಕ ಪ್ರದರ್ಶನ

May 18, 2019

ಮೈಸೂರು: ಕನ್ನಡ ರಂಗಭೂಮಿಯ ದಿಗ್ಗಜ, ಕನ್ನಡದ ಮೊದಲ ವಾಕ್ಚಿತ್ರದ ನಾಯಕ ನಟ ಸುಬ್ಬಯ್ಯ ನಾಯ್ಡು ಅವರ ನಾಟಕ ಸಂಸ್ಥೆಯಾದ `ಶ್ರೀ ಸಾಹಿತ್ಯ ಸಾಮ್ರಾಜ್ಯ’ ನಾಟಕ ಮಂಡಳಿ ವತಿಯಿಂದ ಮೇ 19ರಂದು ಸಂಜೆ 5 ಗಂಟೆಗೆ ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ `ಲೋಕೇಶ್ ನೆನಪು’ 16ನೇ ವರ್ಷದ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ನಟಿ ಗಿರಿಜಾ ಲೋಕೇಶ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದ ಅವರು, ಮೇ 19 ರಂಗಭೂಮಿ ಮತ್ತು ಸಿನಿಮಾ ನಟ, ನಿರ್ಮಾಪಕ, ನಿರ್ದೇಶಕ ಲೋಕೇಶ್ ಅವರ ಜನ್ಮ ದಿನ. ಅವರ ಹೆಸರಿನಲ್ಲಿ ಕಲಾರಂಗಕ್ಕೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಅಂದು ಮೈಸೂರಿನಲ್ಲಿ ನಡೆಯುವ ಲೋಕೇಶ್ ನೆನಪು ಕಾರ್ಯಕ್ರಮದಲ್ಲಿ ಹಿರಿಯ ರಂಗತಜ್ಞ ಚಿಂದೋಡಿ ಬಂಗಾರೇಶ್ ಅವರಿಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ, ಹಿರಿಯ ರಂಗಭೂಮಿ, ಚಲನಚಿತ್ರ ಕಲಾವಿದೆ ಶೈಲಶ್ರೀ ಸುದರ್ಶನ್ ಅವರಿಗೆ ಲಕ್ಷ್ಮೀಬಾಯಿ ಪ್ರಶಸ್ತಿ, ರಂಗಕರ್ಮಿ, ಚಿತ್ರನಟ ರಮೇಶ್ ಭಟ್ ಅವರಿಗೆ ಲೋಕೇಶ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ಕಲಾವಿದರಾದ ರಾಜಶೇಖರ ಕದಂಬ ಮತ್ತು ಶಂಕರ್ ಅಶ್ವಥ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ, ರಂಗತಜ್ಞ ಶ್ರೀನಿವಾಸ್ ಜಿ.ಕಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಸುರುಚಿ ರಂಗಮನೆಯ ವಿಜಯ ಸಿಂಧುವಳ್ಳಿ, ನಟನ ರಂಗಶಾಲೆಯ ಮಂಡ್ಯ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಸಂಜೆ 7 ಗಂಟೆಗೆ ಮಂಡ್ಯ ರಮೇಶ್ ನಿರ್ದೇಶನ ಶೂದ್ರಕನ `ಮೃಚ್ಛಕಟಿಕ’ ನಾಟಕ ಪ್ರದರ್ಶನವಿದೆ ಎಂದು ಹೇಳಿದರು. ಈ ಎಲ್ಲಾ ಕಾರ್ಯ ಕ್ರಮಗಳಿಗೂ ಉಚಿತ ಪ್ರವೇಶ ಎಂದೂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿ ರಾಜಶೇಖರ ಕದಂಬ, ಕಲಾವಿದ ಶಂಕರ್ ಅಶ್ವಥ್ ಉಪಸ್ಥಿತರಿದ್ದರು.

Translate »