ಸಿಎಂ ಬಿಎಸ್‍ವೈ ರಾಜೀನಾಮೆಗೆ ವಾಟಾಳ್ ಆಗ್ರಹ
ಚಾಮರಾಜನಗರ

ಸಿಎಂ ಬಿಎಸ್‍ವೈ ರಾಜೀನಾಮೆಗೆ ವಾಟಾಳ್ ಆಗ್ರಹ

May 5, 2021

ಚಾಮರಾಜನಗರ, ಮೇ 3-ಆಮ್ಲಜನಕ ಕೊರತೆಯಿಂದಾಗಿ ಚಾಮರಾಜನಗರ ಕೋವಿಡ್ ಆಸ್ಪತ್ರೆ ಯಲ್ಲಿ ಸುಮಾರು 24 ಮಂದಿ ಮೃತ ಪಡಲು ರಾಜ್ಯ ಸರ್ಕಾರವೇ ಹೊಣೆ ಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕು ಎಂದು ಮಾಜಿ ಶಾಸಕ, ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಅವರು ಸೋಮವಾರ ಸಂಜೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ಈ ಪ್ರಕರಣ ಕುರಿತು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಒಬ್ಬ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕರಿಂದ ಅಲ್ಲ. ಇದೊಂದು ದೊಡ್ಡ ಪ್ರಕರಣ. ಒಂದು ರೀತಿ ದೇಶದಲ್ಲಿ ದೊಡ್ಡ ದುರಂತ ಎಂದು ವಿಷಾದಿಸಿದರು. ಚಾಮರಾಜನಗರದ ಕಣ್ಣೀರಿನ ಕಥೆಯು ಬಹಳ ನೋವುಂಟು ಮಾಡಿದೆ. ಸರ್ಕಾರ ಸತ್ತವರು ಸತ್ತರು, ನಮಗೇನು ಎನ್ನುವ ನಿರ್ಧಾರಕ್ಕೆ ಬಂದಿದೆ. ಈ ಸಾವಿಗೆ ಕಾರಣ ಯಾರು? ಸಚಿವರು, ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾತಿನ ಮೇಲೆ ಮಾತು ಹೇಳಿ ಚಾಮರಾಜನಗರದಲ್ಲಿ ದೊಡ್ಡ ನಾಟಕವಾಡಿದ್ದಾರೆ.

ಓರ್ವ ಆರೋಗ್ಯಮಂತ್ರಿ ಜಿಲ್ಲಾಡಳಿತ ಭವನದಲ್ಲಿ ಕುಳಿತು ಮಾತನಾಡಿ ಹೋದರು. ಸತ್ತವರ ದೇಹಗಳನ್ನು ಸಂಬಂಧಿಕರು ತೆಗೆದುಕೊಂಡು ಹೋದರು. ಜಿಲ್ಲಾ ಮಂತ್ರಿ ಪತ್ತೆ ಇಲ್ಲ. ಚಾಮರಾಜನಗರದಲ್ಲಿ ಹೇಳವರು ಕೇಳವರು ಯಾರೂ ಇಲ್ಲ. ಚಾಮರಾಜನಗರ ತಬ್ಬಲಿ ಆಗಿದೆ ಎಂದು ನೋವಿನ ನುಡಿ ಗಳನ್ನಾಡಿದರು. ಕೊರೊನಾ ಸೋಂಕು ದಿನದಿನೇ ವೇಗವಾಗಿ ಹರಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧ, ಕಾವೇರಿ ಭವನದಲ್ಲಿ ಕುಳಿತು ಮಾತನಾಡು ವುದಲ್ಲ. ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳನ್ನು ಮಾನಿಟರ್ ಮಾಡಬೇಕು. ರಾಜ್ಯ ಸರ್ಕಾರವೇ ಈ ದುರಂತಕ್ಕೆ ಕಾರಣ. ಚಾಮರಾಜನಗರ ಕೋವಿಡ್ ರೋಗಿಗಳ ಸಾವಿನ ಘಟನೆ ಬಗ್ಗೆ ಗೌರವವಿದ್ದರೆ ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಲಿ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

Translate »