ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ 
ಮೈಸೂರು

ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ 

January 13, 2021

ಮೈಸೂರು,ಜ.12(ಪಿಎಂ)- ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಆಫ್‍ಲೈನ್ ಪರೀಕ್ಷೆ ಕೈಬಿಟ್ಟು, ಆನ್‍ಲೈನ್ ಮೂಲಕ ಪರೀಕ್ಷೆ ನಡೆಸ ಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಆಫ್‍ಲೈನ್‍ನಲ್ಲಿ (ವಿದ್ಯಾರ್ಥಿ ಭೌತಿಕವಾಗಿ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯುವುದು) ಪರೀಕ್ಷೆ ನಡೆಸಬಾರದು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಆನ್‍ಲೈನ್ ಮೂಲಕವೇ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಈ ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ವಿದ್ಯಾರ್ಥಿ ಗಳ ಪರವಾದ ಪ್ರಾಮಾಣಿಕ ಚಿಂತನೆ ಹೊಂದಿಲ್ಲ. ಇದರಿಂದ ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಹಾಳಾಗುತ್ತಿದೆ. ಖಾಸಗಿ ವಿದ್ಯಾ ಸಂಸ್ಥೆಗಳು ಶುಲ್ಕದ ಹೆಸರಿನಲ್ಲಿ ಲೂಟಿ ಮಾಡುತ್ತಿವೆ. ಸಿಎಂ ಯಡಿಯೂರಪ್ಪ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಏಜೆಂಟ್‍ನಂತೆ ವರ್ತಿ ಸುತ್ತಿದೆ ಎಂದು ಆರೋಪಿಸಿದರು.

ತಾಂತ್ರಿಕ ವಿದ್ಯಾರ್ಥಿಗಳಿಗೆ ಈಗಾಗಲೇ 8 ತಿಂಗಳಿಂದ ಆನ್‍ಲೈನ್‍ನಲ್ಲಿ ಪಾಠ ಮಾಡ ಲಾಗಿದೆ. ಈಗ ಆಫ್‍ಲೈನ್‍ನಲ್ಲಿ ಪರೀಕ್ಷೆ ಮಾಡಬೇಕು ಎನ್ನುವುದು ಸರಿಯಲ್ಲ. ಆನ್ ಲೈನ್ ಮೂಲಕವೇ ಪರೀಕ್ಷೆ ನಡೆಸಬೇಕು. ಬೇರೆ ರಾಜ್ಯಗಳಲ್ಲಿ ಆನ್‍ಲೈನ್ ಪರೀಕ್ಷೆ ಮಾಡು ತ್ತಿದ್ದಾರೆ. ಇಲ್ಲಿ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗು ತ್ತಿದೆ. ಆಫ್‍ಲೈನ್ ಪರೀಕ್ಷೆ ನಡೆಸಿದರೆ ಬೇರೆ ರಾಜ್ಯ ಹಾಗೂ ದೂರದಿಂದ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗತಿ ಏನಾಗ ಬೇಕು ಎಂದು ಪ್ರಶ್ನಿಸಿದರು. ಬಹುತೇಕ ಹಾಸ್ಟೆಲ್‍ಗಳು, ಕಾಲೇಜು ಕಟ್ಟಡಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಆನ್‍ಲೈನ್ ಮೂಲಕ ಪರೀಕ್ಷೆ ನಡೆಸುವುದೇ ಸೂಕ್ತ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸಲೇಬೇಕು. ಇಲ್ಲವಾದರೆ ಇಡೀ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ದರು. ಈ ವೇಳೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠ್ಠಲಮೂರ್ತಿ, ನಾಗರಾಜು   ಮತ್ತಿತರರು ಪಾಲ್ಗೊಂಡಿದ್ದರು.

 

 

Translate »