80 ಪೌರಕಾರ್ಮಿಕರಿಂದ 1 ಗಂಟೆಯಲ್ಲಿ ಪುರಭವನ ಸುತ್ತ 164 ಕೆಜಿ ಮರುಬಳಕೆ ತ್ಯಾಜ್ಯ ವಸ್ತು ಸಂಗ್ರಹ!
ಮೈಸೂರು

80 ಪೌರಕಾರ್ಮಿಕರಿಂದ 1 ಗಂಟೆಯಲ್ಲಿ ಪುರಭವನ ಸುತ್ತ 164 ಕೆಜಿ ಮರುಬಳಕೆ ತ್ಯಾಜ್ಯ ವಸ್ತು ಸಂಗ್ರಹ!

January 13, 2021

ಮೈಸೂರು,ಜ.12(ಎಂಟಿವೈ)-ಮೈಸೂರಲ್ಲಿ ಮನೆ ಗಳಿಂದ ಸಂಗ್ರಹಿಸಲಾಗುವ ಒಣಕಸದಲ್ಲಿ ಮರು ಬಳಕೆಗೆ ಯೋಗ್ಯವಾದ ತ್ಯಾಜ್ಯ ಸಾಮಗ್ರಿಗಳಿದ್ದರೆ ಪ್ರತ್ಯೇಕಿಸುವ ಬಗ್ಗೆ ಪೌರಕಾರ್ಮಿಕರಲ್ಲಿ ಅರಿವು ಮೂಡಿಸಲು ಮೈಸೂರು ಮಹಾನಗರ ಪಾಲಿಕೆ ಮಂಗಳವಾರ ಆಯೋ ಜಿಸಿದ್ದ `ಸ್ವಚ್ಛತಾ ಕ್ರೀಡೆ’ಯಲ್ಲಿ 100ಕ್ಕೂ ಹೆಚ್ಚು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. ಅವರಲ್ಲಿ 80 ಮಂದಿ ಒಂದೇ ಗಂಟೆಯಲ್ಲಿ ಪುರಭವನದ ಸುತ್ತಮುತ್ತ ಬಿದ್ದಿದ್ದ, ಮರುಬಳಕೆ ಮಾಡಬಹುದಾದ 164 ಕೆಜಿಗಳಷ್ಟು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಗಮನ ಸೆಳೆದರು.

ಮೈಸೂರಿನ 65 ವಾರ್ಡ್‍ಗಳಲ್ಲೂ ಪ್ರತಿದಿನ 2500ಕ್ಕೂ ಹೆಚ್ಚು ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮನೆಗಳಿಂದ ಒಣ ಹಾಗೂ ಹಸಿ ಕಸ ಸಂಗ್ರಹಿಸುತ್ತಾರೆ. ಇವರಲ್ಲಿ 100 ಮಂದಿಗೆ ಒಣಕಸ ದಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳಿದ್ದರೆ ಪ್ರತ್ಯೇಕಿಸಿ ಅದರ ಪ್ರಯೋಜನ ಪಡೆಯುವ ಬಗ್ಗೆ ಅರಿವು ಮೂಡಿಸಲಾಯಿತು. ಮೊದಲಿಗೆ ತಲಾ 10 ಪೌರಕಾರ್ಮಿಕರ 8 ತಂಡಗಳನ್ನು ರಚಿಸಲಾಯಿತು. ಈ ತಂಡಗಳು ಪುರಭವನದ ಸುತ್ತ ಮರುಬಳಕೆಗೆ ಯೋಗ್ಯವಾದ ಸಾಮಗ್ರಿಗಳನ್ನು ಹೆಕ್ಕಿ ತೆಗೆಯುವುದನ್ನು ಬೆಳಗ್ಗೆ 7.30ಕ್ಕೆ ಆರಂಭಿಸಿದವು. ಬೆಳಗ್ಗೆ 8.30ರ ವೇಳೆ ಗೆಲ್ಲಾ 80 ಮಂದಿ ಪ್ಲಾಸ್ಟಿಕ್ ಸೇರಿದಂತೆ ಮರು ಬಳಕೆ ಮಾಡಬಹುದಾದ 164 ಕೆಜಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಒಂದು ತಂಡವಂತೂ 36.4 ಕೆಜಿ ವರೆಗೂ ಮರುಬಳಕೆ ತ್ಯಾಜ್ಯ ಸಂಗ್ರಹಿಸಿ ಬಹುಮಾನ ಪಡೆಯಿತು. ಪಾಲಿಕೆ ಸದಸ್ಯರಾದ ಸತೀಶ್, ಪ್ರಮೀಳಾ ಭರತ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಎಇಇ ಮೃತ್ಯುಂಜಯಪ್ಪ, ಪರಿಸರ ಅಭಿಯಂತರಾದ ಮೈತ್ರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

Translate »