ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ವಿಧಿವಶ
ಮೈಸೂರು

ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ವಿಧಿವಶ

January 13, 2021

ಬೆಂಗಳೂರು, ಜ.12- ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದಜೀ ಮಹಾರಾಜ್(91) ಅವರು ಮಂಗಳವಾರ ಮಧ್ಯಾಹ್ನ 1.05ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವ-ಆದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರಾಗಿದ್ದ ಸ್ವಾಮಿ ಹರ್ಷಾನಂದಜೀ ಉತ್ತಮ ವಾಗ್ಮಿ ಯಾಗಿದ್ದರು. ಮಠದ ಅತ್ಯಂತ ಹಿರಿಯ ಸನ್ಯಾಸಿಯಾಗಿದ್ದರು.

ರಾಮಕೃಷ್ಣ ಮಠದ 6ನೇ ಅಧ್ಯಕ್ಷ ಸ್ವಾಮಿ ವಿರಾಜ ನಂದರಿಂದ ಮಂತ್ರದೀಕ್ಷೆ, ಮಠದ 8ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದೀಕ್ಷೆ ಪಡೆದಿದ್ದ ಹರ್ಷಾ ನಂದಜೀ ಮಹಾರಾಜ್, 1989ರಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮಂಗಳೂರು, ಮೈಸೂರು, ಬೇಲೂರು ಮಠ ಮತ್ತು ಅಲಹಾಬಾದ್ ರಾಮಕೃಷ್ಣ ಮಠಗಳಲ್ಲೂ ಕಾರ್ಯ ನಿರ್ವಹಿಸಿದ್ದರು. ಬುಧವಾರ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಹಿಂದೂಯಿಸಂ ವಿಶ್ವಕೋಶ: ಸ್ವಾಮೀಜಿ, ಭಾರತೀಯ ಸಂಸ್ಕೃತಿಯನ್ನು ಪ್ರಾಮಾಣಿಕ ವಾಗಿ ಪರಿಚಯಿಸುವ ಗ್ರಂಥಗಳು ವಿರಳವೇ ಆಗಿದ್ದ ಕಾಲದಲ್ಲಿ ಹಿಂದೂಧರ್ಮವನ್ನು ಕುರಿತ ವಿಶ್ವಕೋಶದ ಸಂಕಲ್ಪವನ್ನು ಕೈಗೊಂಡಿದ್ದರು. ಮೊದಲಿಗೆ 3 ಸಂಪುಟಗಳಲ್ಲಿ, 2 ಸಾವಿರ ಪುಟಗಳಲ್ಲಿ `ಎ ಕನ್ಸೈಸ್ ಎನ್‍ಸೈಕ್ಲೋಪಿಡಿಯಾ ಆಫ್ ಹಿಂದೂಯಿಸಂ’ನ ವಿಶ್ವಕೋಶ ಸಿದ್ಧವಾಯಿತು. ಈ 4 ಸಂಪುಟಗಳಲ್ಲಿ ಹಿಂದೂಧರ್ಮದ 1 ಸಾವಿರಕ್ಕೂ ಮೀರಿದ ವಿಷಯಗಳ ಕುರಿತ ಬರಹಗಳಿವೆ. ಹಿಂದೂಧರ್ಮ, ಸನಾತನ ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಬಯಸುವವರಿಗೆ ಇವು ಶ್ರೇಷ್ಠ ಆಕರಗ್ರಂಥಗಳೆನಿಸಿವೆ ಎಂದು ಬಣ್ಣಿಸಲಾಗಿದೆ.

ಸಿಎಂ ಸಂತಾಪ: ಸ್ವಾಮೀಜಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. `ಭಗವಂತನು ಅವರಿಗೆ ಮೋಕ್ಷ ಕರುಣಿಸಲಿ. ಅನುಯಾಯಿಗಳಿಗೆ ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Translate »