`ವಾತ್ಸಲ್ಯ ಸಿಂಧೂರ’ ಕಥಾ ಸಂಕಲನ ಬಿಡುಗಡೆ
ಮೈಸೂರು

`ವಾತ್ಸಲ್ಯ ಸಿಂಧೂರ’ ಕಥಾ ಸಂಕಲನ ಬಿಡುಗಡೆ

February 26, 2021

ಮೈಸೂರು,ಫೆ.25(ಪಿಎಂ)- ವೆಂಕಟಗಿರಿ ಪ್ರಕಾಶನ ಮತ್ತು ಭಾರತ ಕನ್ನಡ ಪರಿಷತ್ತು ಜಂಟಿ ಆಶ್ರಯದಲ್ಲಿ ಗುರುವಾರ ಪರಿಷತ್ತಿನ ರಾಜ್ಯ ಉಪಾಧ್ಯಕ್ಷೆ ಎಸ್.ನಾಗರತ್ನ (ಎಸ್.ಸ್ವಾತಿ) ಅವರ `ವಾತ್ಸಲ್ಯ ಸಿಂಧೂರ’ ಕಥಾ ಸಂಕಲನ ಬಿಡುಗಡೆ ಮಾಡಲಾಯಿತು.

ಮೈಸೂರಿನ ಶಂಕರ ಮಠದ ರಸ್ತೆಯ ಶ್ರೀ ನಟರಾಜ ಪ್ರತಿಷ್ಠಾನ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭ ದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಕೃತಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾಷೆ ಮತ್ತು ಸಾಹಿತ್ಯ ದಿಂದ ನಮ್ಮ ವ್ಯಕ್ತಿಗತ ಬದುಕಿಗೆ ಏನಾದರೂ ಪ್ರಯೋ ಜನ ಇದ್ದರೆ ಮಾತ್ರ ಅದನ್ನು ಒಪ್ಪಿಕೊಳ್ಳುವ ವ್ಯವಸ್ಥೆ ಯಲ್ಲಿದ್ದೇವೆ. ಆದರೆ ಇಂತಹ ಸ್ಥಿತಿಯನ್ನು ನಾವು ತಂದು ಕೊಳ್ಳಬಾರದಿತ್ತು ಎಂದು ವಿಷಾದಿಸಿದರು.

ಇಂದು ಬಿಡುಗಡೆಯಾದ ಕೃತಿ ವರ್ತಮಾನದ ಬದುಕಿಗೆ ತೀರಾ ಅಗತ್ಯ. ಕಾರಣ ಕೃತಿಯಲ್ಲಿನ ಕಥೆಗಳಲ್ಲಿ ಭಾವ ಸ್ಪಂದನೆ ಮುಖ್ಯ ಅಂಶವಾಗಿ ಮೂಡಿ ಬಂದಿರುವುದಾಗಿದೆ. ಇಲ್ಲಿ 15 ಕಥೆಗಳಿದ್ದು, ಇಲ್ಲಿನ ಗಂಡ-ಹೆಂಡತಿ ಪಾತ್ರಗಳ ಹೆಸರು ಗಮನಾರ್ಹ. ಏಕೆಂದರೆ ಇಲ್ಲಿನ ಎಲ್ಲಾ ಗಂಡ-ಹೆಂಡತಿ ಹೆಸರುಗಳು ಜೋಡಿ ಪದಗಳಲ್ಲಿರುವುದಾಗಿದೆ ಎಂದರು.

ಕೃತಿಯಲ್ಲಿನ ಕಥೆಗಳಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಲಾಗಿದೆ. ಜೊತೆಗೆ ಕಥೆ ಯಲ್ಲಿ ಬರುವ ಎಲ್ಲಾ ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರುವುದು ವಿಶೇಷ ಗಮನ ಸೆಳೆಯುತ್ತದೆ. ಆ ಮೂಲಕ ಕನ್ನಡ ಭಾಷಾಭಿಮಾನದ ಮಹತ್ವ ಸಾರಲಾಗಿದೆ. ಒಟ್ಟಾರೆ ಸುಂದರ ಕುಟುಂಬ, ಸಮಾಜ ಹಾಗೂ ಶಿಕ್ಷಣದ ಮಹತ್ವವನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತ ನಾಡಿ, ಇಂದು ಹಿರಿಯರು, ಪೋಷಕರು ಹಾಗೂ ಶಿಕ್ಷಕರ ಬಗ್ಗೆ ಗೌರವ ಭಾವನೆ ನಮ್ಮ ಯುವ ಪೀಳಿಗೆಯಲ್ಲಿ ಬಹು ತೇಕ ಕಡಿಮೆಯಾಗುತ್ತಿದೆ. ಮಕ್ಕಳನ್ನು ಪೋಷಕರು ಕಷ್ಟ ಪಟ್ಟು ಬೆಳೆಸುತ್ತಾರೆ. ಆದರೆ ಅದೇ ಮಕ್ಕಳು ಪೋಷಕರನ್ನು ನಿರ್ಲಕ್ಷ್ಯ ಮಾಡುವುದು ಇಂದು ಹೆಚ್ಚಾಗುತ್ತಿದೆ. ಈ ಪಿಡುಗು ನಗರ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೋವಿಡ್ ಎಂಬ ಕೆಟ್ಟ ಅನುಭವ ನಮಗೆ ಇಂದು ಸಾಕಷ್ಟು ಪಾಠ ಕಲಿಸಿದೆ. ಹೀಗಾಗಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಜೊತೆಗೆ ಮಾನಸಿಕ ನೆಮ್ಮದಿ ಕಾಯ್ದು ಕೊಳ್ಳಲೂ ಆದ್ಯತೆ ನೀಡಬೇಕಿದೆ ಎಂದರು. ಬಳಿಕ ಶಿಶಿರ ಕವಿ ಸಮ್ಮಿಲನ ಗೋಷ್ಠಿಯಲ್ಲಿ ಹಲವರು ಕವಿತೆ ವಾಚಿಸಿದರು. ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಭಾರತ ಕನ್ನಡ ಪರಿಷತ್‍ನ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರಕುಮಾರ್, ಕೃತಿ ಕರ್ತೃ ಎಸ್.ನಾಗರತ್ನ (ಎಸ್.ಸ್ವಾತಿ) ಮತ್ತಿತರರು ಹಾಜರಿದ್ದರು.

Translate »