ವಿಜಯನಗರ 3ನೇ ಹಂತದ ನಿವಾಸಿಗಳ ಆಸ್ತಿ ಪಾಲಿಕೆ ಪಾಲಿಗೆ
ಮೈಸೂರು

ವಿಜಯನಗರ 3ನೇ ಹಂತದ ನಿವಾಸಿಗಳ ಆಸ್ತಿ ಪಾಲಿಕೆ ಪಾಲಿಗೆ

January 5, 2022

ಮೈಸೂರು, ಜ.4 (ಆರ್‍ಕೆಬಿ)- ವಿಜಯನಗರ 3ನೇ ಹಂತದ ನಿವಾಸಿಗಳು ತಮ್ಮ ಆಸ್ತಿಗಳ ಖಾತೆ, ನಕ್ಷೆ ಅನುಮೋದನೆ, ಕಟ್ಟಡ ರಹದಾರಿ ಪಡೆಯಲು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ಮಹಾನಗರಪಾಲಿಕೆ, ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಹೂಟಗಳ್ಳಿ ನಗರಸಭೆ ಹೀಗೆ ಎಲ್ಲಿಗೆ ಹೋಗಬೇಕು ಎಂಬ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಇಂತಹ ಅಲೆದಾಟ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಮುಡಾ ಅಧ್ಯಕ್ಷರು, ಪಾಲಿಕೆ ಆಯುಕ್ತರು ಚರ್ಚಿಸಿ, ನಿವಾಸಿಗಳ ಈ ಸಮಸ್ಯೆಗೆ ಕೊನೆಗೂ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ.
ವಿಜಯನಗರ 3ನೇ ಹಂತದಲ್ಲಿರುವ ಸುಮಾರು 3,500 ಸ್ಥಿರ ಆಸ್ತಿಗಳ ಪೈಕಿ, ಮೈಸೂರು ಮಹಾನಗರ ಪಾಲಿಕೆ 2,000 ಆಸ್ತಿಗಳಿಗೆ ಖಾತಾ ನೋಂದಣಿ, ಖಾತಾ ವರ್ಗಾವಣೆ, ನಕ್ಷೆ ಅನುಮೋದನೆ, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ ನೀಡುತ್ತಿದೆ. ಆದರೆ ಉಳಿದ 1,500 ಆಸ್ತಿಗಳ ಖಾತೆ, ಕಟ್ಟಡ ರಹದಾರಿ ಪಾಲಿಕೆ ವ್ಯಾಪ್ತಿಗೆ ಬರದ ಕಾರಣ ಸರ್ಕಾರದ ವಿವೇಚನೆಗೆ ಬಿಡಲಾಗಿತ್ತು. ಹೀಗಾಗಿ ಇದು ನಿವಾಸಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಈ ಸಂಬಂಧ ನಿವಾಸಿಗಳು ಸಲ್ಲಿಸಿದ ಮನವಿ ಹಿನ್ನೆಲೆ ಯಲ್ಲಿ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರ ಮತ್ತು ಇತರೆ ಚುನಾಯಿತ ಪ್ರತಿನಿಧಿಗಳು 2021ರ ಅ.18ರಂದು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಎಲ್ಲಾ ಆಸ್ತಿಗಳಿಗೆ ಸಂಬಂಧಿ ಸಿದ ಭೂ ದಾಖಲೆಗಳ ನಿರ್ವಹಣೆಯನ್ನು ನಗರಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಈ ನಿರ್ಣಯಕ್ಕೆ ಅನುಸಾರವಾಗಿ ಇಂದು ಅಧಿಕೃತವಾಗಿ ವಿಜಯನಗರ 3ನೇ ಹಂತದಲ್ಲಿ ಎಲ್ಲಾ ಜಮೀನು ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳ ನಿಯಂತ್ರಣ, ನಿರ್ವಹಣೆ ನಗರಪಾಲಿಕೆಗೆ ಬಂದಿದೆ. ಇನ್ನು ಮುಂದೆ ವಿಜಯನಗರ 3ನೇ ಹಂತದ ಆಸ್ತಿ ಮಾಲೀಕರು ಈ ಎಲ್ಲಾ ಕೆಲಸಗಳಿಗೆ ನಗರಪಾಲಿಕೆಯನ್ನೇ ಸಂಪರ್ಕಿಸಬಹುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮಂಗಳ ವಾರ ವಿಜಯನಗರ 3ನೇ ಹಂತದ ಸಂಗಂ ವೃತ್ತದಲ್ಲಿ ಏರ್ಪಡಿಸಿದ್ದ ಕಂದಾಯ ಪಾವತಿ ಅದಾಲತ್ ಕಾರ್ಯಕ್ರಮದಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಗ್ರಾಪಂ ಮಾಜಿ ಸದಸ್ಯ ವಿಜಯನಗರ ಮಂಜು ಇನ್ನಿತರರು ಉಪಸ್ಥಿತರಿದ್ದರು.

Translate »