ಸೆಸ್ಕ್‍ಗೆ ಸರ್ಕಾರಿ ವಿವಿಧ ಇಲಾಖೆಗಳಿಂದ 511.23 ಕೋಟಿ ವಿದ್ಯುತ್ ಬಿಲ್ ಬಾಕಿ
ಮೈಸೂರು

ಸೆಸ್ಕ್‍ಗೆ ಸರ್ಕಾರಿ ವಿವಿಧ ಇಲಾಖೆಗಳಿಂದ 511.23 ಕೋಟಿ ವಿದ್ಯುತ್ ಬಿಲ್ ಬಾಕಿ

January 5, 2022

ಮೈಸೂರು, ಜ. 4(ಆರ್‍ಕೆ)- ಪ್ರತೀ ವರ್ಷ ವಿದ್ಯುತ್ ಶುಲ್ಕ ಹೆಚ್ಚಿಸಿ ಗ್ರಾಹಕರಿಗೆ ಬಿಸಿ ಮುಟ್ಟಿ ಸುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ವು ಬಿಲ್ ಪಾವತಿಸದಿರುವವರ ಸಂಪರ್ಕವನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸುತ್ತದೆ.

ಆದರೆ, ಸರ್ಕಾರಿ ಇಲಾಖೆಗಳೇ ಕೋಟಿಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರೂ ವಸೂಲಿ ಮಾಡದೇ ಸೆಸ್ಕ್ ಮೌನ ವಹಿಸಿರುವುದು ಯಕ್ಷ ಪ್ರಶ್ನೆಯಾಗಿದೆ. ಮೈಸೂರು ಪ್ರಾಂತ್ಯದ 5 ಜಿಲ್ಲೆಗಳ ವಿವಿಧ ಇಲಾಖೆಗಳಿಂದ 2021ರ ನವೆಂಬರ್ ಅಂತ್ಯದ ವೇಳೆಗೆ ಬರೋಬ್ಬರಿ 511.23 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ.

ಮೈಸೂರು, ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನೊಳಗೊಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅತೀ ಹೆಚ್ಚು 274.98 ಕೋಟಿ ರೂ.ಗಳ ವಿದ್ಯುತ್ ಶುಲ್ಕವನ್ನು ಸೆಸ್ಕ್‍ಗೆ ಪಾವತಿಸಬೇಕಿದೆ. 129.63 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಜಲ ಸಂಪನ್ಮೂಲ ಇಲಾಖೆಯು ಎರಡನೇ ಸ್ಥಾನದಲ್ಲಿದೆ.

ನಗರಾಭಿವೃದ್ಧಿ ಇಲಾಖೆಯಿಂದ 48.50 ಕೋಟಿ ರೂ., ಮಂಡ್ಯದ ಮೈಷುಗರ್ ಕಾರ್ಖಾನೆ ಯಿಂದ 34.95 ಕೋಟಿ ರೂ., ಶಿಕ್ಷಣ ಇಲಾಖೆ ಯಿಂದ 1.13 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 1.17 ಕೋಟಿ ರೂ., ಒಳಾಡಳಿತ ಇಲಾಖೆಯಿಂದ 5 ಲಕ್ಷ ರೂ., ಕಂದಾಯ ಇಲಾಖೆಯಿಂದ 46 ಲಕ್ಷ ರೂ., ವಸತಿ ಇಲಾಖೆಯಿಂದ 12 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 10 ಲಕ್ಷ ರೂ., ವಿದ್ಯುತ್ ಶುಲ್ಕ ಬಾಕಿ ಉಳಿದಿದೆ. ಕಾನೂನು ಇಲಾಖೆ 13 ಲಕ್ಷ ರೂ., ಕೃಷಿ ಇಲಾಖೆ 12 ಲಕ್ಷ ರೂ., ತೋಟಗಾರಿಕೆ, ರೇಷ್ಮೆ ಇಲಾಖೆ 7 ಲಕ್ಷ ರೂ., ಪಶುಸಂಗೋಪನಾ ಇಲಾಖೆ 8 ಲಕ್ಷ ರೂ., ಅರಣ್ಯ ಇಲಾಖೆ 25 ಲಕ್ಷ ರೂ., ಪಿಎಸ್‍ಎಸ್‍ಕೆ 99 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆ 31 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 23 ಲಕ್ಷ ರೂ., ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ, ಆಹಾರ ಮತ್ತು ನಾಗರಿಕ ಸರಬರಾಜು, ಕ್ರೀಡಾ, ಅಬಕಾರಿ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಇಲಾಖೆಗಳು ತಲಾ 1 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ. ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂ., ಸಾರಿಗೆ ಇಲಾಖೆಯಿಂದ 3 ಲಕ್ಷ ರೂ., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ 6 ಲಕ್ಷ ರೂ., ಸಣ್ಣ ನೀರಾವರಿಯಿಂದ 6.72 ಕೋಟಿ ರೂ., ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯಿಂದ 40 ಲಕ್ಷ ರೂ., ಗೃಹ ಇಲಾಖೆಯಿಂದ 31 ಲಕ್ಷ ರೂ., ಜವಳಿ ಇಲಾಖೆಯಿಂದ 62 ಲಕ್ಷ ರೂ. ಸೇರಿದಂತೆ 40 ಸರ್ಕಾರಿ ಇಲಾಖೆಗಳಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಒಟ್ಟು 511.23 ಕೋಟಿ ರೂ. ಹಣ ಬರಬೇಕಾಗಿದೆ.

ಕಚೇರಿ, ಕುಡಿಯುವ ನೀರು ಪೂರೈಕೆ, ಬೀದಿ ದೀಪ, ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು, ವಸತಿ ಗೃಹ, ಅತಿಥಿ ಗೃಹಗಳು, ನ್ಯಾಯಾಲಯಗಳು, ಮೀನುಗಾರಿಕೆ ಮಹಾ ವಿದ್ಯಾಲಯ, ಹಾಸ್ಟೆಲ್, ಅಂಗನವಾಡಿ ಕೇಂದ್ರ ಸೇರಿದಂತೆ ಸರ್ಕಾರಿ ಇಲಾಖೆಗಳು ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿರುವ ವಿದ್ಯುತ್ ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿವೆ. ನಿರಂತರ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡುತ್ತಿರುವ ನಿಗಮವು ಇದೀಗ ಎಚ್ಚೆತ್ತುಕೊಂಡು ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಪಟ್ಟಿ ಮಾಡಿ ಸುತ್ತೋಲೆ ಹೊರಡಿಸುತ್ತಿದ್ದು, ವಿದ್ಯುತ್ ಶುಲ್ ವಸೂಲಿಗೆ ಕಾರ್ಯಾಚರಣೆ ನಡೆಸುತ್ತಿದೆ. ಮೈಸೂರು ಮಹಾನಗರ ಪಾಲಿಕೆಯೂ ಸಹ ಬೀದಿ ದೀಪಗಳ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಗ್ರಾಮ ಪಂಚಾಯ್ತಿಗಳಿಂದಲೂ ಅಪಾರ ಪ್ರಮಾಣದ ಬಿಲ್ ಪಾವತಿಯಾಗಬೇಕಿದೆ. 40 ಇಲಾಖೆಗಳ 70,938 ವಿದ್ಯುತ್ ಸ್ಥಾವರ ಪೂರೈಸುತ್ತಿದ್ದು, ಸೆಸ್ಕ್ ವಿದ್ಯುತ್ ಪೂರೈಸುತ್ತಿದ್ದು, ನಿರ್ವಹಣೆಯನ್ನೂ ಮಾಡುತ್ತಾ ನೂರಾರು ಕೋಟಿ ಖರ್ಚು ಮಾಡುತ್ತಿದ್ದರೂ, ವಿದ್ಯುತ್ ಶುಲ್ಕ ವಸೂಲಿ ಮಾಡದೇ ನಿರ್ಲಕ್ಷತೆ ವಹಿಸುತ್ತಿರು ವುದು ನಷ್ಟಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಇದೀಗ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪಟ್ಟಿ ತಯಾರಿಸಿ ಸಂಬಂಧಪಟ್ಟ ಕಚೇರಿ ಮುಖ್ಯಸ್ಥರಿಗೆ ತಿಳಿವಳಿಕೆ ನೋಟಿಸ್ ನೀಡಿ ವಿದ್ಯುತ್ ಶುಲ್ಕ ವಸೂಲಿಗೆ ಕ್ರಮ ವಹಿಸುತ್ತಿದ್ದೇವೆ. ಕೆಲವರು ತಮಗೆ ಸರ್ಕಾರದಿಂದ ಅನುದಾನ ಬಂದಿಲ್ಲ, ಪತ್ರ ವ್ಯವಹಾರ ಮಾಡುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಗಳಾಗಿರುವ ಕಾರಣ ನಿರ್ದಾಕ್ಷಿಣ್ಯವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

Translate »