ಆಡಳಿತ ವರ್ಗದ ಕಿರುಕುಳ ಆರೋಪ : ಧರಣಿಗೆ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ನಿರ್ಧಾರ
ಮೈಸೂರು

ಆಡಳಿತ ವರ್ಗದ ಕಿರುಕುಳ ಆರೋಪ : ಧರಣಿಗೆ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಾರ್ಮಿಕರ ನಿರ್ಧಾರ

October 23, 2018

ಮೈಸೂರು: ಆಂಧ್ರ ಪ್ರದೇಶದಲ್ಲಿರುವ ಕಂಪನಿಯ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡಿ, ಅಲ್ಲಿಯೂ ಕೆಲಸ ನೀಡದೇ ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ಮಾಲಜೀಸ್ ಕಂಪನಿಯ ಆಡಳಿತ ವರ್ಗ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಸಿಐಟಿಯು ಆಶ್ರಯದಲ್ಲಿ ಕಾರ್ಮಿಕರು ಅ. 25ರಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಉದ್ದೇಶಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ಸ್) ಜಿಲ್ಲಾಧ್ಯಕ್ಷ ಎನ್.ಕೆ.ಬಾಲಾಜಿರಾವ್, 19 ಮಂದಿ ಮಹಿಳಾ ಕಾರ್ಮಿಕರು ಸೇರಿ ದಂತೆ ಒಟ್ಟು 90 ಮಂದಿ ಕಾರ್ಮಿಕರನ್ನು ಕಾನೂನುಬಾಹಿರ ವಾಗಿ ಆಂಧ್ರ ಪ್ರದೇಶದ ತಿರುಪತಿಯಿಂದ 20 ಕಿ.ಮೀ. ದೂರದಲ್ಲಿ ರುವ ಕಂಪನಿಯ ಮತ್ತೊಂದು ಘಟಕಕ್ಕೆ ವರ್ಗ ಮಾಡಲಾಗಿತ್ತು. ವರ್ಗಗೊಂಡ ಸ್ಥಳಕ್ಕೆ ಹೋಗಿ ನೋಡಿದರೆ ಅಲ್ಲಿ ಕಾರ್ಖಾನೆ ನಡೆಯುವ ಸ್ಥಿತಿಯೇ ಇರಲಿಲ್ಲ ಎಂದು ಆರೋಪಿಸಿದರು.

ಆ ಘಟಕದಲ್ಲಿ ಯಾವುದೇ ಯಂತ್ರಗಳನ್ನು ಅಳವಡಿಸಿರಲಿಲ್ಲ. ಜೊತೆಗೆ ವಿದ್ಯುತ್ ಸಂಪರ್ಕವನ್ನೂ ಘಟಕಕ್ಕೆ ಕಲ್ಪಿಸಿರಲಿಲ್ಲ. ವರ್ಗಾ ಯಿಸಿದ ಘಟಕದಲ್ಲಿ ಕೆಲಸ ಮಾಡಲು ಸಿದ್ಧವಿದ್ದರೂ ಅದಕ್ಕೆ ಯಾವುದೇ ಪೂರಕ ವಾತಾವರಣ ನಿರ್ಮಿಸಿರಲಿಲ್ಲ. ಕಾರ್ಮಿಕರನ್ನು ಕೆಲಸ ದಿಂದ ತೆಗೆಯಬೇಕೆಂಬ ಹುನ್ನಾರದಿಂದ ಕಂಪನಿ ಆಡಳಿತ ವರ್ಗ ಈ ರೀತಿ ವರ್ಗಾವಣೆ ನಾಟಕವಾಡಿದೆ ಎಂದು ಕಿಡಿಕಾರಿದರು.

ಆಡಳಿತ ವರ್ಗದ ಕಾನೂನುಬಾಹಿರ ಕ್ರಮದಿಂದ ಬೀದಿ ಪಾಲಾದ ಕಾರ್ಮಿಕರು ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ನೊಂದ ಕಾರ್ಮಿಕರ ಮನವಿಗೆ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದ್ದು, ಅ.25ರ ಹೋರಾಟಕ್ಕೂ ನ್ಯಾಯ ಸಿಗದಿದ್ದಲ್ಲಿ ಕಾರ್ಮಿಕರು ಅ.31ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು. ಸಿಐಟಿಯು ಸಂಘಟನೆಯ ಶಶಿಕುಮಾರ್, ಜಿ.ಜಯ ರಾಮ್, ಹೆಚ್.ಎಸ್.ಸುನಂದ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »