ಅ.27ರಿಂದ ಮೈಸೂರಲ್ಲಿ ಗ್ರಾಮ ಪಂಚಾಯಿತಿ  ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ
ಮೈಸೂರು

ಅ.27ರಿಂದ ಮೈಸೂರಲ್ಲಿ ಗ್ರಾಮ ಪಂಚಾಯಿತಿ  ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ

October 23, 2018

ಮೈಸೂರು: ಸಿಐಟಿಯು ಅಂಗ ಸಂಘಟನೆ ಯಾದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ ಅ.27ರಿಂದ 29ರವರೆಗೆ ಮೈಸೂರಿನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಕರ್ನಾಟಕದ ಸಾಂಸ್ಕøತಿಕ ನಗರ ಮೈಸೂರಿನಲ್ಲಿ ಸಂಘದ ಜಿಲ್ಲಾ ಸಮಿತಿ ವತಿಯಿಂದ ಸಂಘಟನೆಯ 7ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ಮೈಸೂರಿನ ಎಂಜಿ ರಸ್ತೆಯ ದಿವಾನ್ ಪೂರ್ಣಯ್ಯ ಸ್ಮಾರಕ ಭವನದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಅ.27ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ. ರಾಜ್ಯ ಎಲ್ಲಾ ಜಿಲ್ಲೆಗಳ ಸುಮಾರು 10 ಸಾವಿರ ನೌಕರರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯು ನಾರಾ ಯಣಶಾಸ್ತ್ರಿ ರಸ್ತೆ ಮೂಲಕ ಪುರಭವನ ತಲುಪಲಿದೆ. ಬಳಿಕ ಪುರಭವನದ ಆವರಣದಲ್ಲಿ ಬೃಹತ್ ಬಹಿರಂಗ ಸಭೆ ಏರ್ಪಡಿಸ ಲಾಗಿದೆ. ಈ ವೇಳೆ ಸಿಐಟಿಯು ಕಾರ್ಯಾಧ್ಯಕ್ಷ ವಿ.ಜೆ.ಕೆ.ನಾಯರ್, ಅಧ್ಯಕ್ಷೆ ಎಸ್.ವರಲಕ್ಷ್ಮಿ, ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಉಪಾಧ್ಯಕ್ಷರಾದ ವಿ.ಪಿ.ಕುಲಕರ್ಣಿ, ಅರಳಿಹಳ್ಳಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ನಾಡಗೌಡ ಮಂಟನಗೌಡ ಇತರರು ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.

ಅ.28ರಂದು ಬೆಳಿಗ್ಗೆ 11ಕ್ಕೆ ದಿವಾನ್ ಪೂರ್ಣಯ್ಯ ಸ್ಮಾರಕ ಭವನದಲ್ಲಿ `ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಧೋರಣೆ’ ಕುರಿತಂತೆ ವಿಚಾರ ಸಂಕಿರಣ ಆಯೋ ಜಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಮಾಜಿ ಸಚಿವ ಹೆಚ್.ಕೆ.ಪಾಟೀಲ್, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಇನ್ನಿತರರು ವಿಚಾರ ಸಂಕಿರಣದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅದೇ ರೀತಿ ಅ.29ರಂದು ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್, ಕಾರ್ಯದರ್ಶಿ ಸಾವಿತ್ರಿ, ನಿರ್ದೇಶಕ ಕೆಂಪೇ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಜಯರಾಮ್, ಸಂಘದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಎಸ್.ದಿನೇಶ್, ಮೈಸೂರು ತಾಲೂಕು ಅಧ್ಯಕ್ಷ ವರುಣಾ ನಾಗರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »