ಮೈಸೂರು, ಜೂ.23(ಎಂಕೆ)- ಕೋವಿಡ್-19 ನಿಯಂತ್ರಣಕ್ಕೆ ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಮಂಗಳವಾರ ಒಂದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿದ್ದ 19 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಸರ್ಕಾರ ಮಾರ್ಗಸೂಚಿ ನೀಡಿದ್ದು, ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆದ್ದರಿಂದ ಮೈಸೂರು ನಗರದಲ್ಲಿ ಸಿಆರ್‍ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿ ದ್ದರೂ ಕೆಲವರು ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ. ಮಾಸ್ಕ್ ಧರಿಸದೇ, ಅಂತರ ಕಾಯ್ದೆ ಕೊಳ್ಳದೇ ಇರುವುದು ಕಂಡು ಬಂದಿರುವುದರಿಂದ ನಗರ ಪೆÇಲೀಸ್ ಆಯುಕ್ತÀ ಚಂದ್ರಗುಪ್ತ ಅವರ ಆದೇಶದ ಮೇರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ವಿರುದ್ಧ ಉದಯಗಿರಿ, ಲಷ್ಕರ್, ಮೇಟಗಳ್ಳಿ, ಕೃಷ್ಣರಾಜ, ಕುವೆಂಪುನಗರ, ಸರಸ್ವತಿಪುರಂ, ಲಕ್ಷ್ಮೀಪುರಂ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳಲ್ಲಿ 19 ಮಂದಿ ವಿರುದ್ಧ ಐಪಿಸಿ 269 ಮತ್ತು ದಿ ಡೆಸರ್ಟ್‍ರ್ ಮ್ಯಾನೇಜ್‍ಮೆಂಟ್ ಆಕ್ಟ್ ಸೆಕ್ಷನ್ 51 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಸ್ಥಳದಲ್ಲಿಯೇ ತಲಾ 200 ರೂ. ದಂಡವನ್ನೂ ವಿಧಿಸಲಾಗಿದೆ. ಕಾರ್ಯಾ ಚರಣೆ ಮುಂದುವರೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸ ಲಾಗಿದೆ ಎಂದು ಡಿಸಿಪಿ ಪ್ರಕಾಶ್‍ಗೌಡ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.