ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‍ನಲ್ಲಿ 10,000 ರನ್ ಪೂರೈಸಿದ್ದಾರೆ. ಈ ಮೂಲಕ ಇಂತಹ ಸಾಧನೆ ಮಾಡಿದ ಭಾರತದ ಐದನೇ ಹಾಗೂ ವಿಶ್ವದ 13ನೇ ಆಟಗಾರ ಎನಿಸಿದ್ದಾರೆ.
ಕೊಹ್ಲಿ 205 ಇನ್ನಿಂಗ್ಸ್‍ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಆ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತೀ ವೇಗವಾಗಿ 10,000 ರನ್ ಪೂರೈಸಿದ ಕ್ರಿಕೆಟಿಗರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ವಿಶೇಷವೆಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 10,000 ರನ್ ಪೂರೈಸಲು 259 ಇನ್ನಿಂಗ್ಸ್ ತೆಗೆದುಕೊಂಡರೆ, ವಿರಾಟ್ ಕೊಹ್ಲಿ 205 ಇನ್ನಿಂಗ್ಸ್ ನಲ್ಲಿಯೇ ಈ ಸಾಧನೆ ಮೆರೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ಪರವಾಗಿ ಹತ್ತು ಸಾವಿರ ರನ್ ಗಳಿಸಿದ ಕ್ರಿಕೆಟಿಗರಲ್ಲಿ ಕೊಹ್ಲಿ ಐದನೆಯವರಾಗಿದ್ದು, ಈ ಹಿಂದೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ (10123), ರಾಹುಲ್ ದ್ರಾವಿಡ್(10889) ಮತ್ತು ಸೌರವ್ ಗಂಗೂಲಿ (11363)ಈ ಸಾಧನೆ ಮಾಡಿದ್ದಾರೆ. ಇನ್ನು ಏಷ್ಯಾ ಖಂಡದ ಆಟಗಾರರೇ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಏಷ್ಯಾ ಖಂಡದ ಹೊರಗೆ ಈ ಸಾಧನೆ ಮಾಡಿದವರೆಂದರೆ ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ.
ಪಂದ್ಯ ಟೈ: ಕೊಹ್ಲಿ ಅಬ್ಬರದಿಂದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ಕೊಹ್ಲಿ 129 ಎಸೆತಗಳಲ್ಲಿ 157 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟ್‍ನಿಂದ 37ನೇ ಏಕದಿನ ಶತಕ ದಾಖಲಿಸಿದರು. ಇನ್ನುಳಿದಂತೆ ಭಾರತ ಪರವಾಗಿ ಅಂಬಟಿ ರಾಯುಡು ಅರ್ಧ ಶತಕ (73), ಶಿಖರ್ ಧವನ್ (30) ಎಂ.ಎಸ್. ಧೋನಿ 20 ರನ್ ಗಳಿಸಿದರು. ಭಾರತದ 322 ರನ್‍ಗಳ ಸವಾಲು ಬೆನ್ನತ್ತಿದ ವೆಸ್ಟ್ ಇಂಡೀಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಪಂದ್ಯ ಟೈ ಆಯಿತು.
ಸಚಿನ್ ದಾಖಲೆ ಹತ್ತಿರ ರೋಹಿತ್: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾರಿಂದ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಗೂ ಗಂಡಾಂತರ ಎದುರಾಗಿದೆ. ಇನ್ನು ರೋಹಿತ್ ಶರ್ಮಾ ಇನ್ನೆರಡು ಸಿಕ್ಸರ್ ಬಾರಿಸಿದರೆ ಸಾಕು ಆಗ ಏಕದಿನದಲ್ಲಿ 195 ಸಿಕ್ಸರ್ ಹೊಡೆದ ಭಾರತೀಯ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸಚಿನ್ ಅವರನ್ನು ರೋಹಿತ್ ಮೀರಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ಸೌರವ್ ಗಂಗೂಲಿ ಅವರ ಸಿಕ್ಸರ್ ದಾಖಲೆ(190) ಮುರಿದಿದ್ದ ರೋಹಿತ್, 194 ಸಿಕ್ಸರ್‍ಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಗರಿಷ್ಠ ಸಿಕ್ಸರ್ ಬಾರಿಸಿದ ಭಾರತೀಯ ದಾಖಲೆ ಎಂಎಸ್ ಧೋನಿ(217 ಸಿಕ್ಸರ್) ಹೆಸರಲ್ಲಿದೆ.