ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ
ಮೈಸೂರು

ನಿಯಮ ಉಲ್ಲಂಘಿಸಿದ 486 ಸಿಎ ನಿವೇಶನ ಸಂಬಂಧ ಮುಡಾ ಶೀಘ್ರ ಮಹತ್ವದ ನಿರ್ಧಾರ

October 25, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಾಗರಿಕರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಖಾಸಗಿ ಸಂಘ-ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ 486 ಸಿಎ ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ.

ನಗರ ಅಭಿವೃದ್ಧಿ ವಿಸ್ವಸ್ಥ ಮಂಡಳಿ (ಸಿಐಟಿಬಿ) ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವಾಗಿ ಪರಿವರ್ತನೆಯಾದ ನಂತರ ಈವರೆಗೆ ಒಟ್ಟು 638 ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ದುರದೃಷ್ಟ ಸಂಗತಿಯೆಂದರೆ 638ರ ಪೈಕಿ 486 ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಮುಡಾ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ.

ಮೈಸೂರು ನಗರದ ವಿವಿಧ ಬಡಾವಣೆ ಹಾಗೂ ನಂಜನಗೂಡಿನ ಮುಡಾ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಸಿಎ ನಿವೇಶನಗಳ ಪೈಕಿ ಅನೇಕ ಸಂಘ-ಸಂಸ್ಥೆ, ಟ್ರಸ್ಟ್‍ಗಳಿಂದ ಸಿಎ ನಿವೇಶನಗಳ ಹಂಚಿಕೆ ನಿಯಮ 10(6)ಮತ್ತು 10(7) ಉಲ್ಲಂಘನೆಯಾಗಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಈ ಹಿಂದಿನಿಂದಲೂ ಮುಡಾ ಅಧಿಕಾರಿಗಳು ನಿಯಮ ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟಿಸ್ ನೀಡುತ್ತಾ ಬಂದಿದ್ದರಾದರೂ, ಜನಪ್ರತಿನಿಧಿಗಳೇ ಪ್ರಾಧಿಕಾರದ ಸದಸ್ಯರಾಗಿರುವುದರಿಂದ ಒಂದಲ್ಲಾ ಒಂದು ಮುಲಾಜು ಹಾಗೂ ಮಾನವೀಯತೆ ಅನುಕಂಪದ ಹೆಸರಲ್ಲಿ ವಾಪಸ್ ಪಡೆಯುವ ಸಾಹಸಕ್ಕೆ ಕೈಹಾಕದೆ ಹಣ ಪಾವತಿಸಲು ಅವಕಾಶ ಕೊಡುತ್ತಾ ಬಂದ ಪರಿಣಾಮವೇ 486 ಸಿಎ ನಿವೇಶನ ಹಂಚಿಕೆದಾರ ಸಂಸ್ಥೆಗಳಿಂದ ನಿಯಮ ಉಲ್ಲಂಘನೆಯಾಗಲು ಪ್ರಮುಖ ಕಾರಣವಾಗಿದೆ. ಬಲಾಢ್ಯರೇ ಬಹುತೇಕ ಸಿಎ ನಿವೇಶನ ಪಡೆದಿರುವು ದರಿಂದ ರಾಜಕೀಯ ಪ್ರಭಾವ ಬೀರಿ ಹಣವನ್ನೂ ಕಟ್ಟದೆ, ಕಟ್ಟಡವನ್ನೂ ನಿರ್ಮಿಸದೇ ಅಥವಾ ಉದ್ದೇಶ ಬದಲಿಸಿಕೊಂಡಿರುವಂತಹ ಅದೆಷ್ಟೋ ಪ್ರಕರಣಗಳಿವೆ.

ಇನ್ನು ಕೆಲವರು ಮುಡಾ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿ ಆದೇಶ ತಂದು ನಂತರವೂ ನಿಯಮ ಪಾಲಿಸದ ಪ್ರಕರಣಗಳೂ ಉಂಟು. ಕಾಯ್ದೆಯಲ್ಲೇ, ನಿಯಮ ಉಲ್ಲಂಘಿಸಿದ ಸಿಎ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬುದು ಇದ್ದಾಗ್ಯೂ, ಯಾರೂ ಜೇನಿನ ಗೂಡಿಗೆ ಕೈಹಾಕುವ ಧೈರ್ಯ ಮಾಡಿಲ್ಲ.

ಇದೀಗ ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಮತ್ತು ಕಾರ್ಯದರ್ಶಿ ಎಂ.ಕೆ.ಸವಿತಾ, ಇಂತಹ ಸಾಹಸದ ಕೆಲಸಕ್ಕೆ ಕೈಹಾಕಿದ್ದು, ಸ್ಪಷ್ಟ ಉಲ್ಲಂಘನೆಯಾದ 486 ಸಿಎ ನಿವೇಶನಗಳನ್ನು ಪಟ್ಟಿ ಮಾಡಿದ್ದಾರೆ. ಅಕ್ಟೋಬರ್ 27ರಂದೇ ಸಭೆ ನಿಗದಿಯಾಗಿತ್ತಾದರೂ, ಲೋಕಸಭಾ ಉಪ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಕಾರಣ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಸಿಎ ನಿವೇಶನಗಳ ಸಂಬಂಧ ಮುಡಾ ಸಭೆಯನ್ನು ನವೆಂಬರ್ 6ರ ನಂತರ ನಡೆಸಲು ನಿರ್ಧರಿಸಲಾಗಿದೆ.

ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಧಿಕಾರಿಗಳು ನಿಯಮ ಉಲ್ಲಂಘನೆಯಾಗಿರುವ 486 ನಿವೇಶನಗಳ ಪಟ್ಟಿಯನ್ನು ಪೂರಕ ಮಾಹಿತಿಯೊಂದಿಗೆ ಮಂಡಿಸಲಿದ್ದಾರೆ.

ಮುಡಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿ ನಿಯಮ ಉಲ್ಲಂಘಿಸಲಾದ ಸಿಎ ನಿವೇಶನಗಳ ಬಗೆಗೆ ಪ್ರತ್ಯೇಕ ಹಾಗೂ ಗಂಭೀರ ಸಭೆ ನಡೆಯುತ್ತಿದ್ದು, ಅಲ್ಲಿ ಮಹತ್ವದ ನಿರ್ಧಾರವಾಗಬೇಕಿದೆ. 486ರ ಪೈಕಿ ಕೆಲವು ಉಲ್ಲಂಘನೆಗಳಿಗೆ ವಿನಾಯಿತಿ ನೀಡಿದರೂ, ಮೂಲ ಹಾಗೂ ಸ್ಪಷ್ಟವಾಗಿ ನಿಯಮವಾಗಿರುವ ಸುಮಾರು 200 ನಿವೇಶನಗಳನ್ನು ವಾಪಸ್ ಪಡೆಯಲೇಬೇಕಾಗಿದ್ದು, ಸಭೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಪ್ರಾಥಮಿಕ ಹಂತದ ಹಣವನ್ನು ಪಾವತಿಸಿ ಗುತ್ತಿಗೆ ಕರಾರು (ಲೀಸ್ ಅಗ್ರಿಮೆಂಟ್) ಮಾಡಿಕೊಳ್ಳದಿರುವುದು, 10 ವರ್ಷದೊಳಗೆ ಕಟ್ಟಡ ನಿರ್ಮಿಸದಿರುವುದು ಹಾಗೂ ಉದ್ದೇಶವನ್ನು ಬದಲಾಯಿಸಿರುವುದು (Purpose Deviation) ಪ್ರಮುಖವಾದ ನಿಯಮ ಉಲ್ಲಂಘನೆಯಾಗಿವೆ.

ಮುಡಾ ನಿರ್ಮಿಸಿದ ಬಡಾವಣೆಯಲ್ಲಿ ಹಂಚಿಕೆಯಾದ ಅತೀ ದೊಡ್ಡ ವಿಸ್ತೀರ್ಣದ ನಿವೇಶನಕ್ಕೆ ನಿಗದಿಪಡಿಸಿದ ಚದರಡಿಯ ದರವನ್ನು ಆಧಾರವಾಗಿರಿಸಿಕೊಂಡು ಸಿಎ ನಿವೇಶನಗಳ ದರವನ್ನು ಈ ಹಿಂದೆ ಚದರಡಿಗೆ 100 ರೂ.ನಂತೆ ನಿಗದಿ ಮಾಡಲಾಗುತ್ತಿತ್ತು. ಈಗ ಅದನ್ನು 200 ರೂ.ಗಳಿಗೆ ಹೆಚ್ಚಿಸಲಾಗಿದೆ.

Translate »