ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಚಿಂತನೆ
ಮೈಸೂರು

ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಚಿಂತನೆ

October 25, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿಂತನೆ ನಡೆಸಿದೆ.

ಮೈಸೂರಿನ ಹಂಚ್ಯಾ-ಸಾತಗಳ್ಳಿ ಬಳಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಕಾಲೇಜು ಹಿಂಭಾಗ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು 20 ಎಕರೆ ಭೂಮಿ ಗುರ್ತಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ (ವಿಶ್ವದರ್ಜೆ) ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತಮಗೆ ಭೂಮಿ ಮಂಜೂರು ಮಾಡುವಂತೆ ಕ್ರಿಕೆಟ್ ಅಸೋಸಿಯೇಷನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವನ್ನು ಕೋರಿಕೊಂಡಿತ್ತು.

ಸಂಘದ ಪ್ರಸ್ತಾವನೆ ಪರಿಶೀಲಿಸಿದ ಮುಡಾ ಅಧಿಕಾರಿಗಳು ಪ್ರಾಧಿಕಾರದ ಸಭೆ ಮುಂದಿಟ್ಟು, ಚರ್ಚಿಸಿದ್ದರು. ಮೂರು ಸಭೆಗಳಲ್ಲಿ ಸಮಾ ಲೋಚನೆ ನಡೆಸಿದ ಬಳಿಕ ಮೈಸೂ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಬಂದಲ್ಲಿ ಸುತ್ತಮುತ್ತಲ ಬಡಾವಣೆಗಳು ಅಭಿವೃದ್ಧಿಯಾಗುವುದಲ್ಲದೆ, ಕ್ರೀಡೆಗೆ ಉತ್ತೇ ಜನ ನೀಡಿದಂತಾಗುತ್ತದೆ ಎಂಬುದನ್ನು ಮನಗಂಡು ಭೂಮಿ ನೀಡಲು ಸದಸ್ಯರು ಸಮ್ಮತಿ ಸೂಚಿ ಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಕೆಎಸ್‍ಸಿಎ ಮನವಿ ಅರ್ಜಿ ಯೊಂದಿಗೆ ಪ್ರಾಧಿಕಾರವು ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪರಿಶೀಲಿಸಿದ ನಗರಾಭಿವೃದ್ಧಿ ಇಲಾಖೆಯು ಕೆಲ ಸ್ಪಷ್ಟೀಕರಣಗಳನ್ನು ಕೇಳಿ ಮೂರು ದಿನಗಳ ಹಿಂದಷ್ಟೇ ಪತ್ರ ಬರೆದಿದೆ ಎಂದು ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಎರಡು ಮೂರು ದಿನಗಳಲ್ಲಿ ತಾವು ಸರ್ಕಾರ ಕೇಳಿರುವ ಮಾಹಿತಿಯೊಂದಿಗೆ ವಿವರ ನೀಡುತ್ತೇವೆ. ಅನುಮತಿ ಬಂದ ನಂತರ ಮತ್ತೆ ಬೋರ್ಡ್ ಮೀಟಿಂಗ್‍ನಲ್ಲಿ ಸದಸ್ಯರ ಅನುಮೋದನೆ ಪಡೆದುಕೊಂಡು ಕ್ರಿಕೆಟ್ ಅಸೋಸಿಯೇಷನ್‍ಗೆ 30 ವರ್ಷ ಗಳ ಅವಧಿಗೆ ನಿಯಮಾನುಸಾರ ಭೂಮಿ ನೀಡಲಾಗುವುದು ಎಂದು ಅವರು ತಿಳಿಸಿದರು.

30ರಿಂದ 40 ಸಾವಿರ ಮಂದಿ ಕುಳಿತು ಕ್ರಿಕೆಟ್ ವೀಕ್ಷಿಸಲು ಆಸನಗಳ ವ್ಯವಸ್ಥೆ, ವಿಶಾಲ ಕ್ರೀಡಾಂಗಣ,ತರಬೇತಿ ಮೈದಾನ ಸೇರಿದಂತೆ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಕರ್ಯ ಗಳೊಂದಿಗೆ ಯೋಜನೆ ಜಾರಿಗೊಳಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿ ಯೇಷನ್ ಸಿದ್ಧತೆ ನಡೆಸಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಕೆಎಸ್‍ಸಿಎ ಸಂಚಾಲಕ ಬಾಲಚಂದರ್, ಭೂಮಿ ನೀಡುವ ಬಗ್ಗೆ ಸರ್ಕಾರದಿಂದ ತಮಗೆ ಅಧಿಕೃತ ಮಾಹಿತಿ ಬಂದಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಸಂಘಕ್ಕೆ ಕ್ರೀಡಾಂಗಣ ನಿರ್ಮಿಸಲು 20 ಎಕರೆ ಭೂಮಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸ ಲಾಗಿದೆ ಎಂದು ಮಾಹಿತಿ ಬಂದಿತ್ತು ಎಂದರು. ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಮನವಿ ಮಾಡಿದ್ದಾರೆ. ಅಧಿಕೃತವಾಗಿ ಭೂಮಿ ಮಂಜೂರಾದರೆ, ನಂತರ ನಾವು ಹಂತ-ಹಂತವಾಗಿ ಕ್ರೀಡಾಂಗಣ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದೂ ಅವರು ತಿಳಿಸಿದರು. ಇನ್ನೂ ನಾವು ನಕ್ಷೆ ಸಿದ್ಧಪಡಿಸಿಲ್ಲ, ಭೂಮಿ ಖಾತರಿಯಾದರೆ ಸಂಘದ ತಾಂತ್ರಿಕ ವಿಭಾಗದಿಂದ ನಕ್ಷೆ ಮತ್ತು ಡಿಪಿಆರ್ ತಯಾರಿಸುತ್ತೇವೆ. ಅಗತ್ಯ ಮೂಲ ಸೌಲಭ್ಯಗಳನ್ನೂ ಅಲ್ಲಿ ಒದಗಿಸಬೇಕಾಗುತ್ತದೆ ಎಂದು ಬಾಲಚಂದರ್ ತಿಳಿಸಿದರು.

Translate »