ಲೋಡ್ ಶೆಡ್ಡಿಂಗ್ ಮಾಡಕೂಡದು: ಹೆಚ್.ಡಿ.ಕುಮಾರಸ್ವಾಮಿ
ಮೈಸೂರು

ಲೋಡ್ ಶೆಡ್ಡಿಂಗ್ ಮಾಡಕೂಡದು: ಹೆಚ್.ಡಿ.ಕುಮಾರಸ್ವಾಮಿ

October 25, 2018

ಬೆಂಗಳೂರು: ವಿದ್ಯುತ್ ಅಭಾವ ವಿದ್ದರೂ ಲೋಡ್‍ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾತ್ಕಾಲಿಕ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡಲು ಐದು ವಿತರಣಾ ಸಂಸ್ಥೆಗಳು ತೀರ್ಮಾನ ಕೈಗೊಂಡಿದ್ದವು. ಇದರ ಮಾಹಿತಿ ತಲುಪುತ್ತಿದ್ದಂತೆ ನಿಮ್ಮ ನಿರ್ಲಕ್ಷ್ಯಕ್ಕೆ ಗ್ರಾಹಕರು ಕಷ್ಟ ಅನುಭವಿಸುವುದು ಬೇಡ. ಇರುವ ವಿದ್ಯುತ್‍ನ್ನೇ ಸಮರ್ಪಕವಾಗಿ ವಿತರಣೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಭಾಗದಲ್ಲಿ ಲೋಡ್‍ಶೆಡ್ಡಿಂಗ್ ಮಾಡ ಕೂಡದು. ಕೃಷಿ ಪಂಪ್‍ಸೆಟ್‍ಗಳಿಗೆ ನಿಗದಿಯಂತೆ ತ್ರಿಪೇಸ್ ಪೂರೈಸಲು ಸೂಚಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕಲ್ಲಿದ್ದಲಿನ ಕೊರತೆಯ ಮಾಹಿತಿ ಅಧಿಕಾರಿಗಳಿಗಿದ್ದರೂ, ಇಂಧನ ಇಲಾಖೆ ಹೊಣೆ ಹೊತ್ತ ಮುಖ್ಯಮಂತ್ರಿಯವರ ಗಮನಕ್ಕೆ ತಂದಿರಲಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲಿನ ಪಾಲು ದಿನದಿಂದ ದಿನಕ್ಕೆ ಕಡಿಮೆಯಾಗಿ ತೀವ್ರ ಸಂಕಷ್ಟಕ್ಕೊಳಗಾದ ಸಂದರ್ಭದಲ್ಲಿ ನಿನ್ನೆಯಷ್ಟೇ ಇಲಾಖಾಧಿಕಾರಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಪರಿಸ್ಥಿತಿಯ ಮಾಹಿತಿ ನೀಡಿದರು. ಕಲ್ಲಿದ್ದಲು ಕೊರತೆಯಿಂದ ಬಳ್ಳಾರಿಯ ಎರಡು ಉಷ್ಣಸ್ಥಾವರ ಘಟಕ ಮತ್ತು ಎರಮರಸುವಿನ ಒಂದು ಘಟಕವನ್ನು ಸಂಪೂರ್ಣ ವಾಗಿ ಸ್ಥಗಿತಗೊಳಿಸಲಾಗುವುದು.

ಈಗಾಗಲೇ ರಾಯಚೂರಿನ ಎರಡು ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ವಿದ್ಯುತ್ ಕೊರತೆಯುಂಟಾಗಿದ್ದು, ಅನಿವಾರ್ಯವಾಗಿ ಲೋಡ್‍ಶೆಡ್ಡಿಂಗ್ ಹೇರಬೇಕಾಗುತ್ತದೆ. ಇದಕ್ಕೆ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರು.

ಇದಕ್ಕೆ ಕೆಂಡಾಮಂಡಲವಾದ ಮುಖ್ಯಮಂತ್ರಿಯವರು ಕಲ್ಲಿದ್ದಲು ಮುಗಿದ ಮೇಲೆ ಸರ್ಕಾರದ ಮುಂದೆ ವಿಷಯ ಪ್ರಸ್ತಾಪಿಸುತ್ತೀರಿ. ಮುನ್ನೆಚ್ಚರಿಕೆಯಾಗಿ ಏತಕ್ಕೆ ಕ್ರಮ ಕೈಗೊಂಡಿಲ್ಲ. ನೀವು ಏನಾದರೂ ಮಾಡಿಕೊಳ್ಳಿ. ಲೋಡ್‍ಶೆಡ್ಡಿಂಗ್‍ಗೆ ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿ ನಾಳೆ ಮಧ್ಯಾಹ್ನ ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಭಾರೀ ಕೊರತೆಯಾಗಿದೆ.

ಜೆಸ್ಕಾಂ ಹಾಗೂ ಬೆಸ್ಕಾಂ ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡುವಂತೆ ಆದೇಶವನ್ನೂ ಹೊರಡಿಸಿತ್ತು, ರಾಜ್ಯದ ಜನರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಸೋಲಾರ್ ಮತ್ತು ಹೈಡ್ರೋ ಪವರ್ ಮೂಲಕ ವಿದ್ಯುತ್ ಉತ್ಪಾದಿಸಿ, ಕೊರತೆ ನೀಗಿಸಿ ಜೊತೆಗೆ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಖರೀದಿ ಮಾಡಿ ಎಂದು ಸೂಚಿಸಿದ್ದಾರೆ.

Translate »