ಆಕರ್ಷಕ ವರ್ಣರಂಜಿತ ವಾಲ್ಮೀಕಿ ಜಯಂತಿ ಮೆರವಣಿಗೆ: ಗಮನ ಸೆಳೆದ ನಾನಾ ಕಲಾ ತಂಡಗಳು, ಸ್ತಬ್ಧಚಿತ್ರಗಳು
ಮೈಸೂರು

ಆಕರ್ಷಕ ವರ್ಣರಂಜಿತ ವಾಲ್ಮೀಕಿ ಜಯಂತಿ ಮೆರವಣಿಗೆ: ಗಮನ ಸೆಳೆದ ನಾನಾ ಕಲಾ ತಂಡಗಳು, ಸ್ತಬ್ಧಚಿತ್ರಗಳು

October 25, 2018

ಮೈಸೂರು: ಕಳೆದ ಶುಕ್ರವಾರವಷ್ಟೇ ನಡೆದ ದಸರಾ ಮಹೋತ್ಸ ವದ ವಿಜೃಂಭಣೆಯ ಜಂಬೂ ಸವಾರಿ ಮೆರವಣಿಗೆಯಂತೆ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ಧೂರಿ ಮೆರವಣಿಗೆ ಮತ್ತೆ ಅದೇ ಸಂಭ್ರಮ ನೆನಪಿಗೆ ತಂದಿತು.

ಮಿನಿ ಜಂಬೂ ಸವಾರಿ ಮೆರವಣಿಗೆ ಎನ್ನುವಷ್ಟು ಸಡಗರದಿಂದ ವಾಲ್ಮೀಕಿ ಜಯಂತಿ ಮೆರವಣಿಗೆ ನಡೆದದ್ದು ವಿಶೇಷ. ವಾಲ್ಮೀಕಿ ಕುಳಿತ ಭಂಗಿಯ ಪ್ರತಿಮೆ ಒಳಗೊಂಡು ಶೃಂಗಾರಗೊಂಡ ಸ್ತಬ್ಧಚಿತ್ರ, ಪೂಜಾ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, ನಾಯಕ ಸಮುದಾಯದ ಮಹನೀಯರ ವೇಷಧಾರಿಗಳು ಹಾಗೂ ಹುಲಿವೇಷಧಾರಿಗಳು, ವಿವಿಧ ಬಗೆಯ ಗಾರುಡಿ ಗೊಂಬೆಗಳು ಸೇರಿದಂತೆ ನಾನಾ ಕಲಾತಂಡಗಳ ವರ್ಣ ರಂಜಿತ ಮೆರವಣಿಗೆ ಗಮನ ಸೆಳೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ನಗರ ಮತ್ತು ತಾಲೂಕು ನಾಯಕ ಸಮುದಾಯದ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ಸಾರೋಟಿನಲ್ಲಿದ್ದ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಿ.ಟಿ.ದೇವೇಗೌಡರು ಚಾಲನೆ ನೀಡಿದರು. ಈ ವೇಳೆ ಶಾಸಕರಾದ ಎಲ್.ನಾಗೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ವಾಸು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.

ಆದರ್ಶ ಬದುಕಿನ ಪರಿಕಲ್ಪನೆ ಕೊಟ್ಟರು: ಇದೇ ವೇಳೆ ಮಾತನಾಡಿದ ಜಿ.ಟಿ.ದೇವೇಗೌಡ, ರಾಮಾಯಣ ಎಂಬ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರು ಮಹಾಕವಿಗಳು. ಕಾಡು-ಮೇಡುಗಳ ಜೀವನದ ನಡುವೆ ಇಂತಹ ಮಹಾಕಾವ್ಯ ರಚನೆ ಮಾಡುವಂತಹ ಪರಿವರ್ತನೆ ಅವರಲ್ಲಿ ಮೂಡಿತು. ವಾಲ್ಮೀಕಿಯವರು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ಆದರ್ಶ ಬದುಕಿನ ಪರಿಕಲ್ಪನೆ ಕಟ್ಟಿಕೊಟ್ಟಿದ್ದಾರೆ ಎಂದರು.

ಡೊಳ್ಳು ಕುಣಿತ, ಪೂಜಾ ಕುಣಿತ, ಮರಗಾಲು ಕುಣಿತ, ಗೊರವನ ಕುಣಿತ, ಯಕ್ಷ ಕುಣಿತ, ನಗಾರಿ, ತಮಟೆ, ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ಮೆರವಣಿಗೆಗೆ ಹೆಚ್ಚಿನ ರಂಗು ನೀಡಿದವು. ಹಲವು ಕುದುರೆ ಸಾರೋಟುಗಳಲ್ಲಿದ್ದ ನಾಯಕ ಸಮುದಾಯದ ವೀರಪುರುಷರ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಮದಕರಿ ನಾಯಕ, ಗಂಡುಗಲಿ ಕುಮಾರರಾಮ, ಸಿಂಧೂರ ಲಕ್ಷ್ಮಣ, ಕೆಳದಿ ಶಿವಪ್ಪ ನಾಯಕ, ಬೇಡರ ಕಣ್ಣಪ್ಪ, ಏಕಲವ್ಯ ಮೊದಲಾದ ವೇಷಧಾರಿಗಳು ಸಮುದಾಯದ ಗತಕಾಲದ ವೈಭವ ಅನಾವರಣಗೊಳಿಸಿದರು. ಸಾವಿರಾರು ಮಂದಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಯಶಸ್ವಿಗೊಳಿಸಿದರು. ಚಾಮರಾಜ ಒಡೆಯರ್ ವೃತ್ತ, ಕೆಆರ್ ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೇಟ್ರೋಪೋಲ್ ವೃತ್ತ, ವಿನೋಭ ರಸ್ತೆಗಳಲ್ಲಿ ಸಾಗಿದ ಭಾರೀ ಮೆರವಣಿಗೆ ಅಂತಿಮವಾಗಿ ಸಭಾ ಕಾರ್ಯಕ್ರಮ ಏರ್ಪಡಿಸಿದ್ದ ಕಲಾಮಂದಿರದ ಆವರಣದಲ್ಲಿ ಮುಕ್ತಾಯಗೊಂಡಿತು. ಮೈಸೂರು ಉಪವಿಭಾಗಾಧಿಕಾರಿ ಶಿವೇಗೌಡ, ಮೈಸೂರು ತಹಸೀಲ್ದಾರ್ ಟಿ.ರಮೇಶ್‍ಬಾಬು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಬಿ.ಎಸ್.ಪ್ರಭಾ, ಮುಡಾ ಆಯುಕ್ತ ಕಾಂತರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಹೆಚ್.ಎಸ್.ಬಿಂಧ್ಯಾ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಕೆಲಕಾಲ ಸಂಚಾರ ದಟ್ಟಣೆ…: ಮೆರವಣಿಗೆಯಲ್ಲಿ ಸ್ತಬ್ದಚಿತ್ರ, ಸಾರೋಟುಗಳು, ಜಾನಪದ ಕಲಾತಂಡಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ಪಾಲ್ಗೊಂಡಿದ್ದರಿಂದ ಚಾಮರಾಜ ಒಡೆಯರ್ ವೃತ್ತದಿಂದ ಕೆ.ಆರ್.ವೃತ್ತದವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಮೆರವಣಿಗೆ ಸಾಗಿದ ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆಗಳಲ್ಲೂ ಭಾರೀ ಮೆರವಣಿಗೆ ಹಿನ್ನೆಲೆಯಲ್ಲಿ ಆಗಾಗ್ಗೆ ಸಂಚಾರ ದಟ್ಟಣೆ ತಲೆದೋರಿತ್ತು.

ಧ್ವನಿವರ್ಧಕ ಅಳವಡಿಸಿ ವಾಹನ ಮೆರವಣಿಗೆಯಲ್ಲಿ ಸಾಗಲು ಒತ್ತಾಯ…: ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರ ಗುಂಪೊಂದು ಹಿಂದೆ ಧ್ವನಿವರ್ಧಕ ಅಳವಡಿಸಿದ್ದ ಗೂಡ್ಸ್ ಆಟೋ ಮೆರವಣಿಗೆಯಲ್ಲಿ ಸಾಗಬೇಕೆಂದು ಒತ್ತಾಯಿಸಿದರು. ಆದರೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ವಿರುದ್ಧ ದಿಕ್ಕಾರ ಕೂಗಿ, ಬಳಿಕ ಸಮಾಧಾನಗೊಂಡರು.

ವಿಶ್ವನಾಥ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ…

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎ.ಹೆಚ್.ವಿಶ್ವನಾಥ್ ರಾಜೀನಾಮೆ ನೀಡುತ್ತಾರೆ ಎಂಬುದು ಕೇವಲ ವದಂತಿ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. -ಜಿ.ಟಿ.ದೇವೇಗೌಡ, ಉಸ್ತುವಾರಿ ಸಚಿವರು

ಜಿಲ್ಲಾಡಳಿತ ಎಲ್ಲಾ ಶಾಸಕರಿಗೂ ದಸರಾ ಪಾಸ್ ನೀಡಿದೆ…

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆ ಪಾಸ್‍ಗಳನ್ನು ಜಿಲ್ಲಾಡಳಿತ ಎಲ್ಲಾ ಶಾಸಕರಿಗೂ ತಲುಪಿಸಿದೆ. ಕೆಲವರಿಗೆ ಕಡಿಮೆ ಆಗಿರಬಹುದು. ದಸರಾ ಪಾಸ್ ವಿಚಾರ ಈಗ ಮುಗಿದ ಅಧ್ಯಾಯ. ಇನ್ನೂ ಮೈಸೂರು ಮೇಯರ್ ಸ್ಥಾನ ಯಾವ ಪಕ್ಷಕ್ಕೆ ನೀಡಬೇಕೆಂಬುದನ್ನು ಎರಡೂ ಪಕ್ಷಗಳ ವರಿಷ್ಠರು ನಿರ್ಧರಿಸಲಿದ್ದಾರೆ. ವಾಲ್ಮೀಕಿ ಆಚರಣೆಯಲ್ಲಿ ಹೆಚ್ಚು ರಾಜಕೀಯ ಮಾತನಾಡುವುದು ಬೇಡ.  – ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ.

Translate »